ಪ್ರಗತಿವಾಹಿನಿ ಸುದ್ದಿ, ಕಾರವಾರ – ಉತ್ತರ ಕನ್ನಡ ಜಿಲ್ಲಾ ಪಂಚಾಯತದ ೨೦೨೦-೨೧ನೇ ಸಾಲಿನ ೧೦೩೬ ಕೋಟಿ ರೂ. ಆಯವ್ಯಯವನ್ನು ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಶುಕ್ರವಾರ ಮಂಡಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅಧ್ಯಕ್ಷೆ, ಈ ಕರಡು ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ. ಈ ವರ್ಷ ಯೋಜನೆ ಲೆಕ್ಕ ಶೀರ್ಷಿಕೆ ಮತ್ತು ಯೋಜನೇತರ ಲೆಕ್ಕ ಶೀರ್ಷಿಕ ಎಂಬ ಪ್ರತ್ಯೇಕ ವಿಂಗಡಣೆ ಇಲ್ಲ ಎಂದು ತಿಳಿಸಿದರು.
ಜಿಪಂ ಕಾರ್ಯಕ್ರಮಗಳಿಗೆ ೩೧೫.೪೪ ಕೋಟಿ, ತಾಪಂ ಕಾರ್ಯಕ್ರಮಗಳಿಗೆ ೭೨೦.೩೧ ಕೋಟಿ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ ೬೬ ಲಕ್ಷ ಒದಗಿಸಲಾಗಿದೆ. ಜಿಪಂ ಹಾಗೂ ಅಧೀನ ಇಲಾಖೆಗಳ ಸಿಬ್ಬಂದಿಯ ವೇತನಕ್ಕೆ ೧೦೧.೧೭ ಕೋಟಿ, ಹೊರ ಗುತ್ತಿಗೆ ನೌಕರರ ವೇತನಕ್ಕೆ ೮೦.೮ ಕೋಟಿ, ದಿನಗೂಲಿ ನೌಕರರ ವೇತನಕ್ಕೆ ೭೭.೦೪ ಲಕ್ಷ ಹಾಗೂ ಕಚೇರಿ ವೆಚ್ಚ, ಅಭಿವೃದ್ಧಿ ಕಾರ್ಯಗಳಿಗೆ ೨೦೫.೪೦ ಕೋಟಿಯನ್ನು ವಿಂಗಡಿಸಲಾಗಿದೆ ಎಂದು ಜಯಶ್ರೀ ಮೊಗೇರ ಅವರು ತಿಳಿಸಿದರು.
ಕೊರೊನಾ ವಾರಿಯರ್ಸ್ಗೆ ಶ್ಲಾಘನೆ
ಕೊರೊನಾ ವಿರುದ್ಧ ಹೋರಾಡುತ್ತಿರುವವರ ಕುರಿತು ಜಿ ಪಂ ಸದಸ್ಯರಿಂದ ಶ್ಲಾಘನೆ ವ್ಯಕ್ತವಾಯಿತು. ಅಧಿಕಾರಿಗಳು, ಸಿಬ್ಬಂದಿ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ವೈದ್ಯರು , ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರು ಸಹ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಸರ್ವ ಸದಸ್ಯರು ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಅಲ್ಲದೇ ಜಿಪಂ ಸಿಇಒ ಎಂ. ರೋಶನ್ ಅವರು ಭಟ್ಕಳದ ಆಸ್ಪತ್ರೆಗೆ ಭೇಟಿ ನೀಡಿ ಬಂದ ಬಗ್ಗೆ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಗಳ ಬಗ್ಗೆ ಅಭಿಯಾನದ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚೈತ್ರಾ ಕೊಠಾಕರ್, ಬಸವರಾಜ ದೊಡ್ಮನಿ, ಉಷಾ ನಾಯ್ಕ ಹಾಗೂ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ