ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಂಡಾಯ ಭುಗಿಲೆದ್ದಿದ್ದು, ಅಸಮಾಧಾನಿತ ಶಾಸಕರು ಮತ್ತೆ ಸಭೆ ಸೇರಲು ನಿರ್ಧರಿಸಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಒಂದೆಡೆ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದ್ದರೆ ಇನ್ನೊಂದೆಡೆ ಬಂಡಾಯ ಶಾಸಕರ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಯತ್ನ ನಡೆಸಿದೆ. ಈ ನಡುವೆ ಬುಧವಾರ ಮತ್ತೊಮ್ಮೆ ಸಭೆ ಸೇರಲು ಬಂಡಾಯ ಶಾಸಕರು ತೀರ್ಮಾನಿಸಿದ್ದಾರೆ.
2 ದಿನಗಳ ಹಿಂದಷ್ಟೇ ಬಿಜೆಪಿ ಬಂಡಾಯ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರು ಊಟದ ನೆಪದಲ್ಲಿ ಸಭೆ ಸೇರಿದ್ದು, ಸಚಿವ ಸ್ಥಾನ, ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಸಿಎಂ ಯಡಿಯೂರಪ್ಪನವರ ಮಗ ವಿಜಯೇಂದ್ರ ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ, ವಿಚಾರಗಳಲ್ಲಿ ತಲೆಹಾಕುತ್ತಿದ್ದು, ಯಡಿಯೂರಪ್ಪ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಅಭಿಪ್ರಾಯ ಹಲವರದ್ದಾಗಿದ್ದು, ಇದು ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದೆಡೆ ತಮಗೆ ಸಚಿವ ಸ್ಥಾನದ ಭರವಸೆ ನೀಡುವವರೆಗೂ ಪಟ್ಟು ಸಡಿಲಿಸಲು ಅಸಮಾಧಾನಿತ ಶಾಸಕರು ರೆಡಿಯಿದ್ದಂತಿಲ್ಲ. ಇನ್ನೊಂದೆಡೆ ಶಾಸಕ ಉಮೇಶ್ ಕತ್ತಿ ತಮ್ಮನ್ನು ಮಂತ್ರಿ ಮಾಡಬೇಕು ಹಾಗೂ ಸಹೋದಯ ರಮೇಶ ಕತ್ತಿಗೆ ರಾಜ್ಯಸಭೆಯ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದ್ದಾರೆ. ಇತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಕ್ಷೇತ್ರಕ್ಕೆ ಸೂಕ್ತ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಉಳಿದ ಶಾಸಕರು ನಿಗಮಮಂಡಳಿ ಹಾಗೂ ಇತರೆ ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ