Karnataka NewsLatest

ಜೂನ್ 21 ಅಂತರಾಷ್ಟ್ರೀಯ ಯೋಗದಿನ

ಡಾ. ನಿರ್ಮಲಾ ಬಟ್ಟಲ, ಬೆಳಗಾವಿ
ಭಾರತದ ತತ್ವಶಾಸ್ತ್ರವು ಜಗತ್ತಿಗೆ ಹಲವು ಜ್ಞಾನದರ್ಶನಗಳನ್ನು ಕೊಡುಗೆಯಾಗಿ ನೀಡಿದೆ. ಅವುಗಳಲ್ಲಿ ಯೋಗಶಾಸ್ತ್ರವು ಒಂದು. ಪುರಾತನ ಭಾರತೀಯ ದಾರ್ಶನಿಕರು, ಮಾನವ ಜನ್ಮ ಅದು ಎಷ್ಟೇ ಸುಖವಾಗಿದ್ದರೂ, ಎಷ್ಟೇ ತ್ಯಾಗಮಯವಾಗಿದ್ದರು ಅನೇಕ ರೀತಿಯ ಕರ್ಮಗಳ ಸಂಕೀರ್ಣ. ಆ ಸಂಕೀರ್ಣದಿಂದ ಆತ್ಮ ಮುಕ್ತಗೊಳ್ಳಬೇಕು. ತತ್ವಶಾಸ್ತ್ರವು ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸೂಚಿಸಬೇಕು ಎನ್ನುವ ನಂಬಿಕೆಯನ್ನು ಹೊಂದಿದ್ದರು.
ಯೋಗವು ಅನೇಕ ಸಾವಿರ ವರ್ಷಗಳಿಂದಲೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಭಾರತೀಯರ ಜೀವನದ ಒಂದು ಅಂಗವಾಗಿದ್ದು ಅದು ಅವರ ಚಿಂತನ ಶೈಲಿಯನ್ನು, ಜೀವನ ವೈಖರಿಯನ್ನು ಒಂದಲ್ಲ ಒಂದು ರೀತಿಯಲ್ಲಿ ನಿರ್ಧರಿಸುತ್ತಾ ಬಂದಿದೆ. ಜೀವನದ ಮಹೋನ್ನತ ದ್ಯೇಯವಾದ ಮೋಕ್ಷವನ್ನು ಗಳಿಸಲು ಯೋಗದ ಹೊರತಾಗಿ ಸಾಧ್ಯವಿಲ್ಲ ಎನ್ನುವುದನ್ನು ಅರಿತಿದ್ದಾರೆ.
ಯೋಗ ಎಂದರೆ ಜೋಡಿಸು, ಹೊಂದಿಸು, ಒಂದಾಗಿಸು ಎಂಬ ಅರ್ಥವಿದೆ. ಜೀವಾತ್ಮವನ್ನು ಪರಮಾತ್ಮನಲ್ಲಿ ಸೇರಿಸುವುದೇ ಯೋಗ ಎಂಬ ಸಾಂಪ್ರದಾಯಿಕ ಅರ್ಥವಿದೆ.
೧೯೬ ಸೂತ್ರಗಳನ್ನು ಒಳಗೊಂಡಿರುವ ’ಪತಂಜಲಿ ಯೋಗಸೂತ್ರ’ ಸಮಾಧಿ ಪಾದ, ಸಾಧನಾ ಪಾದ, ಕೈವಲ್ಯ ಪಾದ ಮತ್ತು ವಿಭೂತಿ ಪಾದ ಎಂಬ ನಾಲ್ಕು ಪಾದಗಳಾಗಿ ವಿಭಜಿಸಲ್ಪಟ್ಟಿದೆ. ಪ್ರತಿಯೊಬ್ಬ ವ್ಯಕ್ತಿಯೂ ಯೋಗ ಸಾಧನೆಯಲ್ಲಿ ತೊಡಗಲು ಅನುಕೂಲವಾಗುವಂತಹ ಎಂಟು ಅಂಗಗಳನ್ನು ಪತಂಜಲಿ ಸೂಚಿಸಿದ್ದಾನೆ. ಆ ಎಂಟು ಅಂಗಗಳ ಮೂಲಕ ಯೋಗವನ್ನು ಸಾಧಿಸುವ ಮಾರ್ಗಕ್ಕೆ ಅಷ್ಠಾಂಗ ಯೋಗ ಎಂದು ಹೆಸರು.
ಯಮ: ಹಿಂಸೆ, ಕಳುವು, ಕಾಮಾತುರತೆ ಮತ್ತು ಪರರಿಂದ ಪಡೆಯುವಿಕೆಯನ್ನು ನಿಷೇಧಿಸುವುದೇ ಯಮ
ನಿಯಮ: ಪರಿಶುದ್ದತೆ, ತಪಸ್ಸು, ಆತ್ಮಾವಲೋಕನ, ಸಂತೋಷ ಇವುಗಳನ್ನು ಮೈಗೂಡಿಸಿಕೊಳ್ಳುವುದು ನಿಯಮ.
ಆಸನ: ಕೈ, ಕಾಲು, ಮುಂಡ, ಮಾಂಸಖಂಡಗಳಿಗೆ ನೀಡುವ ವ್ಯಾಯಾಮದ ಪ್ರಕ್ರಿಯೆ.
ಪ್ರಾಣಾಯಾಮ: ಇದು ಕ್ರಮಬದ್ದವಾದ ಉಸಿರಾಟ ಪ್ರಕ್ರಿಯೆ. ಇದು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವುದು.
ಪ್ರತ್ಯಾಹಾರ: ನಿಗ್ರಹ ಶಕ್ತಿ ಇಂದ್ರೀಯಗಳ ಮೇಲಿನ ಪ್ರಭುತ್ವವನ್ನು ಶೀತಲಗೊಳಿಸುವಂತೆ, ಮನಸ್ಸನ್ನು ಹಿಂದೆಗೆಯುವ ಬಗೆ.
ಧಾರಣ: ಮನಸಿನ ಏಕಾಗ್ರತೆ ಸಾಧಿಸುವುದು
ಧ್ಯಾನ: ಕೇಂದ್ರೀಕರಿಸಿದ ಸಂಗತಿಯ ಮೇಲೆ ಗಾಢ ವಿಚಾರದಲ್ಲಿ ಮುಳುಗುವುದು.
ಸಮಾಧಿ: ಧ್ಯಾನಿಸುವುದರ ಜೊತೆಗೆ ಲೀನವಾಗುವಂತಹ ಮಾನಸಿಕ ಸ್ಥಿತಿ, ಸಮಾಧಿ ಅಷ್ಠಾಂಗ ಯೋಗದ ಕೊನೆಯ ಭಾಗ.
ಜಗತ್ತಿನ ಜನರಿಗೆ ಯೋಗದ ಕುರಿತು ಅರಿವು ಮೂಡಿಸಿ ಯೋಗದಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿಸಲು ವಿಶ್ವಸಂಸ್ಥೆಯು ೨೦೧೪ ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವಿಯಂತೆ ಜೂನ್ ೨೧ ನ್ನು ಅಂತರಾಷ್ಟ್ರೀಯ ಯೋಗದಿನವಾಗಿ ಘೋಷಿಸತು. ಯೋಗವು ಪ್ರಸ್ತುತ ಆಧುನಿಕ ಪ್ರಪಂಚದ ಒತ್ತಡದ ಜೀವನ ಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಾಯಕಾರಿಯಾಗಿದೆ. ೨೦೧೫ರ ಜೂನ್ ೨೧ ರಿಂದ ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.
ಅಂತರಾಷ್ಟ್ರೀಯ ಯೋಗದಿನ ನಡೆದ ಸ್ಥಳಗಳು- 
೨೦೧೫ ರಲ್ಲಿ ನವದೆಹಲಿ, ೨೦೧೬ ರಲ್ಲಿ ಚಂಡೀಗಢ, ೨೦೧೭ರಲ್ಲಿ ಲಕ್ನೋ, ೨೦೧೮ ರಲ್ಲಿ ಡೆಹ್ರಾಡೂನ್, ೨೦೧೯ರಲ್ಲಿ ರಾಂಚಿ, ೨೦೨೦ರ ಈ ಕೊರೋನಾ ಸಂದರ್ಭಲ್ಲಿ ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ಎನ್ನುವ ಧ್ಯೇಯವಾಕ್ಯದೊಂದಿಗೆ ಯೋಗದಿನವನ್ನು ಆಚರಿಸೋಣ. ಕೊರೋನಾ ಮಹಾಮಾರಿಯಿಂದ ಮುಕ್ತಿ ಪಡೆಯಲು ಇಂದು ನಮಗೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಅಗತ್ಯತೆಯಿದೆ. ಶ್ವಾಸಕೋಶಕ್ಕೆ ತೊಂದರೆಕೊಡುವ ವೈರಾಣುವಿನ ಪ್ರಾಭಲ್ಯ ಮುರಿಯಲು ಪ್ರಾಣಾಯಾಮ ಅತ್ಯಂತ ಸಹಾಯಕಾರಿಯಾದ ಯೋಗಾಭ್ಯಾಸವಾಗಿದೆ. ನಮ್ಮಲ್ಲಿಯೇ ಇರುವ ಯೋಗ ಚಿಕಿತ್ಸಾ ಕ್ರಮದ ಮೂಲಕ ನಮ್ಮ ಅಂತರ್ ಶಕ್ತಿ (ರೋಗ ನಿರೋಧಕ)ಯನ್ನು ಹಿಚ್ಚಿಸಿಕೊಳ್ಳೋಣ. ಮಹಾಮಾರಿ ಕೊರೋನಾದ ವಿರುದ್ದ ಹೋರಾಡೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button