Latest

ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಿ : ಮೇಘಣ್ಣವರ

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಂಭವವಿದ್ದು, ಸಮಸ್ಯೆಯನ್ನು ಪರಿಹರಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಸೂಚಿದರು.
ಅವರು ಗುರುವಾರ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ೨೦೧೯ರ ಜನವರಿ ಯಿಂದ ಜೂನ್ ವರೆಗಿನ ಅವಧಿಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟ, ಬೆಳಗಾವಿ, ಧಾರವಾಡ ಹಾಗೂ ಗದಗ ಜಿಲ್ಲೆಗಳ ಬಹುತೇಕ ಗ್ರಾಮಗಳು ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯವನ್ನು ಅವಲಂಬಿಸಿದ್ದು, ಪ್ರಸ್ತುತ ಜಲಾಶಯದಲ್ಲಿ ಸಂಗ್ರಹವಿರುವ ಅಲ್ಪ ಪ್ರಮಾಣದ ನೀರನ್ನು ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಮಿತವಾಗಿ ಬೇಡಿಕೆಗನುಗುಣವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಜಲಾಶಯದ ನೀರು ಹರಿದು ಬಿಡಬೇಕಾದಲ್ಲಿ ಅತೀ ತೀವ್ರವಾದ ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳೆಷ್ಟು, ಈ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ವ್ಯಾಪ್ತಿಗೊಳಪಟ್ಟ ಗ್ರಾಮಗಳೆಷ್ಟು, ನೀರು ತೀರಾ ಅಗತ್ಯವೆನಿಸಿದಲ್ಲಿ ಎಷ್ಟು ಗ್ರಾಮಗಳಿಗೆ ಎಷ್ಟು ಪ್ರಮಾಣದ ನೀರು ಎಷ್ಟು ದಿನಗಳಿಗೆ ಸಾಕಾಗಬಹುದು ಎನ್ನುವುದರ ಬಗ್ಗೆ ಸಂಭವನೀಯ ಕಾರ್ಯಯೋಜನೆಯೊಂದನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಜಲಾಶಯದಿಂದ ಹರಿಬಿಡಲಾದ ನೀರು ಬೇರೆ ಉದ್ದೇಶಗಳಿಗೆ ಉಪಯೋಗಿಸಿ ಬ್ಯಾರೇಜನಲ್ಲಿಯ ನೀರು ಖಾಲಿಯಾದಲ್ಲಿ ಸಂಬಂಧಪಟ್ಟ ಅಧೀಕ್ಷಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ ಮತ್ತು ಹೆಸ್ಕಾಂ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು, ನೀರು ಹರಿಸುವ ಸಂದರ್ಭಗಳಲ್ಲಿ ನದಿಗುಂಟ ಇರುವ ಜನರೇಟರ್, ಡಿಸೈಲ್ ಪಂಪ್ ಇತ್ಯಾದಿಗಳ ಮೂಲಕ ರೈತರು ಹಗಲು-ರಾತ್ರಿ ಕೃಷಿಗೆ ನೀರು ಎತ್ತುವಳಿ ಮಾಡಿಕೊಳ್ಳುವ ಸಂಭವವಿದ್ದು, ಹೆಸ್ಕಾಂ ಅಧಿಕಾರಿಗಳು ಆ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಹರಿದುಬಿಟ್ಟಲ್ಲಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವಂತೆ ಹಾಗೂ ನೀರು ಉದ್ದೇಶಿತ ಸ್ಥಳವನ್ನು ಸುಗಮವಾಗಿ ತಲುಪುವಂತೆ ನೋಡಿಕೊಳ್ಳುವ ದಿಸೆಯಲ್ಲಿ ವಿವಿಧ ಇಲಾಖೆಗಳ ಜವಾಬ್ದಾರಿಯುತ ತಂಡಗಳನ್ನು ರಚಿಸಿ, ಆ ತಂಡಗಳಿಗೆ ಸೂಕ್ತ ಜವಾಬ್ದಾರಿಗಳನ್ನು ವಹಿಸುವುದು ಆಯಾ ಜಿಲ್ಲಾಧಿಕಾರಿಗಳ ಕಾರ್ಯವಾಗಿರುತ್ತದೆ. ಪ್ರತಿ ತಂಡವು ತಮ್ಮ ವ್ಯಾಪ್ತಿಯ ಬ್ಯಾರೇಜ್‌ಗಳ ಸಾಕ್ಷ್ಯ ಚಿತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಕುಡಿಯುವ ನೀರಿನ ಅಭಾವ ಈಗಿನಿಂದಲೇ ಆಗಿದ್ದು, ಜನರಿಗೆ ತೊಂದರೆ ಆಗದಂತೆ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಬಾಗಲಕೋಟ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button