ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ಸರಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಕಳೆದ ಸುಮಾರು ೬ ವರ್ಷಗಳಿಂದ ಇದನ್ನು ನಾನು ಮಾಡುತ್ತ ಬಂದಿದ್ದೇನೆ. ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಸಿದ್ಧರಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಪಿಆರ್‌ಇಡಿ ಅಡಿಯಲ್ಲಿ ರೂ.೧೧ ಲಕ್ಷ ಅನುದಾನದಲ್ಲಿ ಸ್ಥಳೀಯ ವಿದ್ಯಾಮಂದಿರ ಶಾಲೆಯ ಕೊಠಡಿಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಅತಿ ಪ್ರಾಮುಖ್ಯತೆ ಪಡೆದಿದೆ. ಮೊದಲು ಶ್ರೀಮಂತರ ವೃತ್ತಿಯನ್ನು ಅವರ ಮಕ್ಕಳು ಮುಂದುವರೆಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು ಸಾಮಾನ್ಯರ, ಬಡವರ, ರೈತರ, ಕೂಲಿಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಸುಮಾರು ೭೫ ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಹೆಮ್ಮೆ ಪಡುವಂತಹದ್ದು. ಇಂತಹ ಒಳ್ಳೆಯ ಕಾರ್ಯ ಮಾಡುವ ಎಲ್ಲರಿಗೂ ಸರಕಾರದ ಯೋಜನೆಗಳನ್ನು ತಲುಪಿಸುವುದು ಈ ಭಾಗದ ಶಾಸಕಿಯಾಗಿ ರಾಜ್ಯದ ಒಬ್ಬ ಸಚಿವೆಯಾಗಿ ನನ್ನ ಆದ್ಯ ಕರ್ತವ್ಯವಾಗಿದೆ ಎಂದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನುದಾನದಡಿಯಲ್ಲಿ ಕ್ಷೇತ್ರದ ಗಳತಗಾ ಗ್ರಾಮದ ಹಾಗೂ ಸ್ಥಳೀಯ ಶಾಲೆಗಳಿಗೆ ಅನುದಾನ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ, ಅವಿನಾಶ ಮಾನವಿ, ವಿವೇಕ ಪುರಂದರೆ, ನಿತೀನ ವಖಾರಿಯಾ, ನಂದನ ಶೆಟ್ಟೆ, ನಿತೀನ ಶಹಾ, ಮುಖ್ಯ ಶಿಕ್ಷಕಿ ವಿ.ಬಿ. ಹೆಗಡೆ, ವಿ.ಆರ್. ಜನವಾಡೆ, ಪ್ರಣವ ಮಾನವಿ, ನಗರಸಭೆ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ನರೇಂದ್ರ ಶಹಾ ಸ್ವಾಗತಿಸಿದರು. ಪಿ.ಎಂ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಣ್ಣಾಸಾಹೇಬ ಖೋತ ವಂದಿಸಿದರು.
ಸಭಾಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ