Latest

ಶಿಕ್ಷಕರಿಗೆ ಮನೆಯಿಂದಲೇ ಕೆಲಸ: ಒಂದೆರಡು ದಿನದಲ್ಲಿ ಆದೇಶ ಸಾಧ್ಯತೆ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ ಆರಂಭಿಸಬೇಕೆನ್ನುವ ಕುರಿತು ಸರಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಬಹುತೇಕ ಪಾಲಕರು ಸೆಪ್ಟಂಬರ್ ನಂತರವೇ ಶಾಲೆಗಳನ್ನು ಪ್ರರಂಭಿಸಬೇಕೆನ್ನುವ ಅಭಿಪ್ರಾಯವನ್ನು ಸರಕಾರಕ್ಕೆ ನೀಡಿದ್ದಾರೆ.

ಆದರೆ ಶಾಲೆಗಳ ಅರಂಭಕ್ಕೂ ಮುನ್ನ ಮಾಡಬೇಕಾದ ಪೂರ್ವ ಸಿದ್ಧತೆಯ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಶಿಕ್ಷಕರನ್ನು ಶಾಲೆಗೆ ಕರೆಸಲಾಗುತ್ತಿದೆ. ಜೂನ್ 8ರಿಂದ ಶಿಕ್ಷಕರು ರಾಜ್ಯಾದ್ಯಂತ ಶಾಲೆಗೆ ಹೋಗುತ್ತಿದ್ದಾರೆ.

ಆದರೆ ಶಿಕ್ಷಕರು ಪಟ್ಟಣ ಪ್ರದೇಶದಿಂದ ಹಳ್ಳಿಗಳಿಗೆ ಶಾಲೆಗೆ ತೆರಳುತ್ತಿದ್ದು, ಪ್ರತಿ ನಿತ್ಯ ಆತಂಕದಿಂದಲೇ ಹೋಗುತ್ತಿದ್ದಾರೆ. ಸಾರ್ವಜನಿಕ ವಾಹನಗಳಲ್ಲಿ ತೆರಳುವುದರಿಂದ ಕೊರೋನಾ ಅಪಾಯವಿದೆ. ಅಲ್ಲದೆ ಎಷ್ಟೋ ಕಡೆ ಬಸ್ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಜೊತೆಗೆ, ಶಿಕ್ಷಕರು ನಗರ ಪ್ರದೇಶದಿಂದ ತೆರಳುವುದರಿಂದ ಗ್ರಾಮೀಣ ಜನರೂ ಆತಂಕದಲ್ಲಿದ್ದಾರೆ.

ಇವೆಲ್ಲದರ ಜೊತೆಗೆ ಈವರೆಗೂ ಶಾಲೆಗಳ ಆರಂಭದ ದಿನ ನಿರ್ಧರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಿಕ್ಷಕರು ಅನವಶ್ಯಕವಾಗಿ ಶಾಲೆಗೆ ಹೋಗುವುದಕ್ಕೆ ಬ್ರೇಕ್ ಹಾಕಲು ಸರಕಾರ ಮುಂದಾಗಿದೆ ಎಂದು ಗೊತ್ತಾಗಿದೆ. ಪೂರ್ವ ಸಿದ್ಧತೆಗಳು ಬಹುತೇಕ ಎಲ್ಲ ಶಾಲೆಗಳಲ್ಲೂ ಮುಗಿದಿರುವುದರಿಂದ ಮತ್ತು ಬಾಕಿ ಇರುವ ಕೆಲಸಗಳನ್ನು ಮನೆಯಿಂದಲೇ ನಿರ್ವಹಿಸಲು ಸಾಧ್ಯವಿರುವುದರಿಂದ ಶಿಕ್ಷಕರಿಗೆ ಶಾಲೆಗೆ ತೆರಳುವುದರಿಂದ ವಿನಾಯಿತಿ ನೀಡುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಕರ್ನಾಟಕ ಪ್ರಾಥಮಿಕ ರಾಜ್ಯ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ನಾರಾಯಣ ಸ್ವಾಮಿ ಹಾಗೂ ಕಾರ್ಯದರ್ಶಿಗಳಾದ ಜಗದೀಶ್ ಗೌಡಪ್ಪ ಪಾಟೀಲ್ ಮತ್ತು ಚಂದ್ರಶೇಖರ್ ನುಗ್ಗಿ ಅವರು ಕೊರೋನಾ ಮಹಾಮಾರಿ ರಾಜ್ಯಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಮತ್ತು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ವಿನಂತಿಸಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳು ಪುನಾರಂಭವಾಗುವವರೆಗೆ ಶಾಲೆಗೆ ಬರುವ ಅಗತ್ಯವಿಲ್ಲ. ಬಾಕಿ ಇರುವ ಕೆಲಸಗಳನ್ನು ಮನೆಯಿಂದಲೇ ನಿರ್ವಹಿಸಬೇಕು ಎನ್ನುವ ಆದೇಶವನ್ನು ಸೋಮವಾರ ಅಥವಾ ಮಂಗಳವಾರ ಸರಕಾರ ಹೊರಡಿಸುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button