Latest

ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚೀನಾ ಸೇನೆ ಎರಡು ಕಿ.ಮೀ.ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರೇನು ರಕ್ಷಣಾ ಸಚಿವರೇ? ಇಲ್ಲವೇ ಸೇನಾ ಮುಖ್ಯಸ್ಥರೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಭಾರತ-ಚೀನಾ ಗಡಿ ಪ್ರದೇಶ ಲಡಾಖ್ ನಲ್ಲಿ ಚೀನಾ ಸೇನೆ ಹಿಂದಕ್ಕೆ ಸರಿದಿದೆ ಎಂದು ಬಿ ಎಲ್ ಸಂತೋಷ್ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ಟ್ವಿಟರ್ ನಲ್ಲಿ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನ ಮಂತ್ರಿ. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳ ನುಸುಳಿಲ್ಲ ಎಂದಾದರೆ, ಹಿಂದೆ ಸರಿದದ್ದು ಎಲ್ಲಿಂದ?ಎನ್ನುವುದನ್ನೂ ತಿಳಿಸಲಿ ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಪ್ರಯಾಣ ದರದ ಹೆಸರಿನಲ್ಲಿ ಕಾಂಗ್ರೆಸ್ ಘಟಕ ರಾಜ್ಯ ಸರ್ಕಾರಕ್ಕೆ 1 ಕೋಟಿ ರೂ. ಚೆಕ್‌ ನೀಡಿತ್ತು. ಇದನ್ನು ಪ್ರಶ್ನೆ ಮಾಡಿದ್ದ ಬಿ.ಎಲ್.‌ ಸಂತೋಷ್‌ ಕಾಂಗ್ರೆಸ್‌ ನೀಡಿದ್ದ 1 ಕೋಟಿ ಲೆಕ್ಕ ಕೇಳಿದ್ದರು. ಈ ಕುರಿತೂ ಗುಡುಗಿರಿವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಬಡ ಜನರ ಖಾತೆಗೆ ಹಾಕಿರುವ 15 ಲಕ್ಷದ ಲೆಕ್ಕ ಕೊಡಲಿ. ಪಿಎಂ ಕೇರ್ಸ್‌‌ಗೆ ಸಾರ್ವಜನಿಕರು ನೀಡಿರುವ ಹಣದ ಲೆಕ್ಕ ಕೊಡಲಿ. ಆನಂತರ ಕಾಂಗ್ರೆಸ್‌ ನೀಡಿರುವ 1 ಕೋಟಿ ಪರಿಹಾರ ಹಣದ ಲೆಕ್ಕ ನೀಡಲು ನಾವು ಸಿದ್ದ ಎಂದಿದ್ದಾರೆ.

ಇನ್ನು ಪ್ರತಿಪಕ್ಷ ನಾಯಕರಾಗಿ ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್.ಎಸ್ ಎಸ್ ನಾಯಕ ಸಂತೋಷ್‌ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ನಾನು ನಡೆಸಿದ್ದ ಅಧಿಕಾರಿಗಳ ಸಭೆಯ ವಿವರವೂ ಸೇರಿದಂತೆ ನಿಮ್ಮ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ವಿವರ ನೀಡುವೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button