ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ಟೋಬರ್ 01 ರಿಂದ ಕಾಲೇಜುಗಳು ತೆರೆಯಲಿವೆ. ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ವರ್ಷ ಶಾಲಾ-ಕಾಲೇಜುಗಳ ಶೈಕ್ಷಣಿಕ ತರಗತಿಗಳು ಆರಂಭವಾಗುವುದು ಅನುಮಾನ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಅಶ್ವತ್ಥ ನಾರಾಯಣ, ಕಾಲೇಜು ಮತ್ತು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೆಪ್ಟೆಂಬರ್ ಮೊದಲ ತಿಂಗಳಿನಿಂದ ಆನ್ಲೈನ್ ತರಗತಿಗಳು ನಡೆಯಲಿವೆ. ಆದರೆ, ಅಕ್ಟೋಬರ್ 01 ರಿಂದ ಈ ವರ್ಷದ ಶೈಕ್ಷಣಿಕ ತರಗತಿಗಳು ಎಂದಿನಂತೆ ಜರುಗಲಿವೆ ಎಂದು ಹೇಳಿದ್ದಾರೆ.
ಪ್ರತಿ ವಿಶ್ವವಿದ್ಯಾಲಯದಲ್ಲೂ ಹೆಲ್ಪ್ಲೈನ್ ಪ್ರಾರಂಭ ಮಾಡಲಾಗುವುದು, ಈ ಹೆಲ್ಪ್ಲೈನ್ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಇದರ ಮೂಲಕ ಅಗತ್ಯ ಮಾಹಿತಿಯನ್ನೂ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಕೊರೋನಾ ಲಾಕ್ ಡೌನ್ ಆರಂಭವಾದ ಬಳಿಕ ಆನ್ಲೈನ್ ತರಗತಿಗಳ ಕುರಿತು ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಕೆಲವರು ಆನ್ಲೈನ್ ತರಗತಿಗಳು ಬೇಕು ಎಂದರೆ, ಕೆಲವರು ಆನ್ಲೈನ್ ತರಗತಿಯನ್ನು ವಿರೋಧಿಸುತ್ತಿದ್ದಾರೆ. ಅಲ್ಲದೆ, ಶಾಲಾ-ಕಾಲೇಜು ತರಗತಿಗಳು ಈ ವರ್ಷ ಆರಂಭವಾಗುವುದೇ ಅನುಮಾನ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ