Kannada NewsLatest

ದಾಖಲೆ ಮಟ್ಟದಲ್ಲಿ ಹಾಲು ಶೇಖರಣೆ, 530 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆ : ಬಾಲಚಂದ್ರ ಜಾರಕಿಹೊಳಿ

ಕೆಎಂಎಫ್‌ಗೆ ಹಾಲು ಪೂರೈಸಿದ ರೈತರಿಗೆ ಸರ್ಕಾರದಿಂದ ನೆರವು

 

ಹಾಲು ಒಕ್ಕೂಟಗಳಿಂದ ಪ್ರತಿದಿನ ೮೮ ಲಕ್ಷ ಲೀಟರ್ ಹಾಲು ದಾಖಲೆ ಮಟ್ಟದಲ್ಲಿ ಶೇಖರಣೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ ೬ ಲಕ್ಷ ಲೀ ಹಾಲಿನ ಶೇಖರಣೆ ಹೆಚ್ಚಾಗಿದೆ. ಕಳೆದ ಮಾರ್ಚ ತಿಂಗಳಿಗೆ ಹೋಲಿಸಿದಾಗ ಪ್ರತಿದಿನ ಸುಮಾರು ೨೦ ಲಕ್ಷ ಲೀಟರ್ ಹಾಲು ಹೆಚ್ಚಾಗಿದೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕಳೆದ ಫೆಬ್ರುವರಿಯಿಂದ ಜುಲೈ ೪ ರವರೆಗೆ ರೈತರಿಗೆ ನೀಡಬೇಕಾಗಿದ್ದ ೫೩೦ ಕೋಟಿ ರೂ. ಪ್ರೋತ್ಸಾಹಧನ ಸರ್ಕಾರದಿಂದ ಬಿಡುಗಡೆಯಾಗಿದ್ದು, ತ್ವರಿತವಾಗಿ ರೈತರ ಖಾತೆಗಳಿಗೆ ಜಮಾ ಆಗಲಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಂಗಳೂರಿನ ಕಹಾಮ ಕಛೇರಿಯಲ್ಲಿ ಮಂಗಳವಾರ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.
ಪ್ರಸ್ತುತ ಕಹಾಮದ ಹಾಲು ಒಕ್ಕೂಟಗಳಿಂದ ಪ್ರತಿದಿನ ೮೮ ಲಕ್ಷ ಲೀಟರ್ ಹಾಲು ದಾಖಲೆ ಮಟ್ಟದಲ್ಲಿ ಶೇಖರಣೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ ೬ ಲಕ್ಷ ಲೀ ಹಾಲಿನ ಶೇಖರಣೆ ಹೆಚ್ಚಾಗಿದೆ. ಕಳೆದ ಮಾರ್ಚ ತಿಂಗಳಿಗೆ ಹೋಲಿಸಿದಾಗ ಪ್ರತಿದಿನ ಸುಮಾರು ೨೦ ಲಕ್ಷ ಲೀಟರ್ ಹಾಲು ಹೆಚ್ಚಾಗಿದೆ ಎಂದು ಹೇಳಿದರು.
ಕೋವಿಡ್-೧೯ ಕಾರಣದಿಂದ ಹಾಲು, ಮೊಸರಿನ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದ್ದು, ಪ್ರತಿದಿನ ೧೦ ರಿಂದ ೧೨ ಲಕ್ಷ ಲೀಟರ್ ಮಾರಾಟ ಕಡಿಮೆಯಾಗಿದೆ. ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪ್ರತಿ ತಿಂಗಳು ವಿತರಿಸುತ್ತಿದ್ದ ೨೦೦೦ ಮೆಟ್ರಿಕ್ ಟನ್ ಹಾಲಿನ ಪುಡಿ ಕೂಡ ಶಾಲೆಗಳು ಮುಚ್ಚಿದ್ದರಿಂದ ಇದುವರೆಗೂ ವಿಲೇವಾರಿ ಆಗುತ್ತಿಲ್ಲ. ಹಾಲಿನ ಶೇಖರಣೆ ಹೆಚ್ಚಳ ಹಾಗೂ ತೀವ್ರ ಮಾರಾಟ ಕುಸಿತದಿಂದ ಪ್ರತಿದಿನ ೩೫ ಲಕ್ಷ ಲೀಟರ್‌ನಷ್ಟು ಹೆಚ್ಚುವರಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ದಿನಾಲೂ ೩೦೫ ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು ೧೫೦ ರಿಂದ ೧೬೦ ಮೆಟ್ರಿಕ್ ಟನ್ ಬೆಣ್ಣೆ ಉತ್ಪಾದನೆಯಾಗಿ ದಾಸ್ತಾನು ಹೆಚ್ಚುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆರ್ಥಿಕವಾಗಿ ಕಷ್ಟ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
೨೦೨೦ರ ಡಿಸೆಂಬರ್ ಅಂತ್ಯಕ್ಕೆ ಕೆನೆರಹಿತ ಹಾಲಿನ ಪುಡಿ ೫೫೦೦೦ ಮೆಟ್ರಿಕ್ ಟನ್ ಆಗಬಹುದೆಂದು ಅಂದಾಜಿಸಲಾಗಿದ್ದು, ಈಗಾಗಲೇ ದೇಶದಾದ್ಯಂತ ೧.೫೦ ಲಕ್ಷ ಮೆಟ್ರಿಕ್ ಟನ್ ಕೆನೆರಹಿತ ಹಾಲಿನ ಪುಡಿ ದಾಸ್ತಾನು ಇರುವುದಾಗಿ ವರದಿಯಾಗಿದೆ ಎಂದು ಹೇಳಿದರು.
ಕಹಾಮ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಕಹಾಮದ ಒಕ್ಕೂಟಗಳ ಹಂತದಲ್ಲಿ ಕೆಲವು ರೂಪುರೇಷೆಗಳನ್ನು ಅಳವಡಿಸಿಕೊಂಡಿದ್ದು, ಅದರನ್ವಯ ಕೆಲವು ಮಿತಿಗಳೊಂದಿಗೆ ಹಾಲಿನ ಶೇಖರಣೆ, ಸಂಸ್ಕರಣೆ ಮತ್ತು ಮಾರಾಟವನ್ನು ನಿರ್ವಹಿಸಲಾಗುತ್ತಿದೆ. ಎಪ್ರೀಲ್ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಇದ್ದಿದ್ದರಿಂದ ಸರ್ಕಾರವು ಕಹಾಮ ಬೇಡಿಕೆಯಂತೆ ಒಕ್ಕೂಟಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿದಿನ ಅಂದಾಜು ೭.೭೫ ಲಕ್ಷ ಲೀಟರ್ ಹಾಲನ್ನು ೩೭ ರೂ.ಗಳಂತೆ ರಾಜ್ಯ ಸರ್ಕಾರವು ಒಕ್ಕೂಟಗಳಿಂದ ಖರೀದಿಸಿ ಬಡವರಿಗೆ ಹಾಗೂ ಸಂತ್ರಸ್ಥರಿಗೆ ವಿತರಿಸಿದ್ದರಿಂದ ಅಂದಾಜು ೮೦ ಕೋಟಿ ರೂ. ಮೊತ್ತದ ಹಾಲನ್ನು ಸರ್ಕಾರ ಖರೀದಿ ಮಾಡಿದೆ ಎಂದು ಹೇಳಿದರು.
ಹಾಲನ್ನು ಹೊರ ರಾಜ್ಯಗಳಿಗೆ ರವಾನಿಸಲು ಕಷ್ಟಸಾಧ್ಯವಿದ್ದರೂ ಕೇರಳ ರಾಜ್ಯಕ್ಕೆ ವಿಷು ಹಬ್ಬದ ಪ್ರಯುಕ್ತ ಹೆಚ್ಚಿನ ಹಾಲಿನ ಬೇಡಿಕೆ ಬಂದಿದ್ದು, ಅಂದಾಜು ೧೫ ಲಕ್ಷ ಲೀಟರ್ ಹಾಲನ್ನು ರವಾನಿಸಲಾಗಿದೆ. ಆಂದ್ರಪ್ರದೇಶದ ಕೋರಿಕೆಯಂತೆ ಅಲ್ಲಿನ ಅಂಗನವಾಡಿ ಮಕ್ಕಳಿಗೆ ಯುಎಚ್‌ಟಿ ಹಾಲನ್ನು ಪ್ರತಿ ತಿಂಗಳಿಗೆ ೫೬ ಲಕ್ಷ ಲೀ. ಹಾಲನ್ನು ಸರಬರಾಜು ಮಾಡುತ್ತಿದೆ. ಅದರಂತೆ ತೆಲಂಗಾಣ ರಾಜ್ಯಕ್ಕೂ ಸಹ ೨೦ ಲಕ್ಷ ಲೀ. ಯುಎಚ್‌ಟಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗುತ್ತಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳ ಕಷ್ಟ ಸಾಧ್ಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆನೆರಹಿತ ಹಾಲಿನ ಪುಡಿ ಮತ್ತು ಬೆಣ್ಣೆ ದರಗಳು ದಿನೇ ದಿನೇ ಇಳಿಕೆಯಾಗುತ್ತಿದ್ದು, ಪ್ರಸ್ತುತ ಹಾಲಿನ ಪುಡಿ ದರವು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ೧೩೦ ಮತ್ತು ಬೆಣ್ಣೆ ಪ್ರತಿ ಕೆಜಿಗೆ ೨೦೭ಕ್ಕೆ ಕುಸಿದಿದೆ ಎಂದು ಹೇಳಿದರು.
೨೦೧೨-೧೩ನೇ ಸಾಲಿನಲ್ಲಿ ಹಾಲಿನ ಪುಡಿ ಉತ್ಪಾದನೆ ಮತ್ತು ಮಾರಾಟದ ದರದ ವ್ಯತ್ಯಾಸದ ಮೊತ್ತದಲ್ಲಿ ಕನಿಷ್ಠ ಶೇ ೫೦ ರಷ್ಟು ನಷ್ಟವನ್ನು ರಾಜ್ಯ ಸರ್ಕಾರ ಭರಿಸಿದಂತೆ ಪ್ರಸ್ತುತ ೫೫ ಸಾವಿರ ಮೆಟ್ರಿಕ್ ಟನ್ ಕೆನೆರಹಿತ ಹಾಲಿನ ಪುಡಿಗೆ ಪ್ರತಿ ಕೆಜಿಗೆ ೧೨೦ ರೂ. ದರದಲ್ಲಿ ಕನಿಷ್ಠ ಶೇ ೫೦ ರಷ್ಟು ಅಂದರೆ ರೂ. ೬೦ ರಂತೆ ಅಂದಾಜು ೩೩೦ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಭರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕಹಾಮ ವತಿಯಿಂದ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮೀತಿಯನ್ನು ರಚಿಸಲಾಗಿದ್ದು, ಒಕ್ಕೂಟ ಮತ್ತು ಘಟಕಗಳು ವೆಚ್ಚ ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಶೇಖರಣಾ ದರವನ್ನು ಪ್ರತಿ ಕೆಜಿಗೆ ೨೫ ರೂ. ಅಥವಾ ಅದಕ್ಕಿಂತ ಕಡಿಮೆ ನಿಗದಿಪಡಿಸಿದರೆ ಹಾಲು ಉತ್ಪಾದಕರಿಗೆ ರಾಸುಗಳನ್ನು ನಿರ್ವಹಿಸಲಿಕ್ಕೆ ಕಷ್ಟವಾಗುತ್ತದೆ. ಹೆಚ್ಚಿನ ದರ ನಿಗದಿಪಡಿಸಿದಲ್ಲಿ ಒಕ್ಕೂಟಗಳಿಗೆ ನಷ್ಟವಾಗುತ್ತದೆ. ಆದ್ದರಿಂದ ರೈತರಿಗೆ ಮತ್ತು ಒಕ್ಕೂಟಗಳಿಗೆ ನಷ್ಟವಾಗದಂತೆ ಕಾರ್ಯಕ್ರಮಗಳನ್ನು ರೂಪಿಸಲು ಒಕ್ಕೂಟಗಳಿಗೆ ಅವರು ಸೂಚನೆ ನೀಡಿದರು.
ಕೇಂದ್ರ ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ೮೫೦ ಕೋಟಿ ರೂ. ಸಾಲಸೌಲಭ್ಯವನ್ನು ಕಹಾಮ ಹಾಗೂ ಒಕ್ಕೂಟಗಳಿಗೆ ನೀಡಲು ಬ್ಯಾಂಕುಗಳ ಮೂಲಕ ಕಾಯ್ದಿರಿಸಿದ್ದು, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಈ ಮೊತ್ತವನ್ನು ಬಳಕೆ ಮಾಡಿಕೊಳ್ಳುವಂತೆ ಹಾಲು ಒಕ್ಕೂಟಗಳಿಗೆ ಅವರು ಸೂಚಿಸಿದರು. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾರಾಟ ಮತ್ತು ಶೇಖರಣಾ ದರಗಳ ಅಂತರವನ್ನು ಕಡಿಮೆ ಮಾಡಿ ಸಾಧ್ಯವಿರುವ ಎಲ್ಲ ರೀತಿಯ ನಿರ್ವಹಣೆ ಆಡಳಿತಾತ್ಮಕ ಶೇಖರಣೆ, ಮಾರಾಟ ವೆಚ್ಚಗಳನ್ನು ಕಡಿಮೆ ಮಾಡುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಹಾಲು ಒಕ್ಕೂಟಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಪಶು ಸಂಗೋಪನಾ ನಿರ್ದೇಶಕ ಡಾ||ಡಿ.ಎನ್. ಹೆಗಡೆ, ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಕುಲಕರ್ಣಿ, ಅಭಿಯಂತ ಖರೀದಿ ನಿರ್ದೇಶಕ ಸುರೇಶ ಕುಮಾರ, ಹಣಕಾಸು ನಿರ್ದೇಶಕ ರಮೇಶ ಕೊಣ್ಣೂರ, ಅಪರ ನಿರ್ದೇಶಕ ರಘುನಂದನ, ಆಡಳಿತ ನಿರ್ದೇಶಕ ಸಿ.ಎನ್. ರಮೇಶ, ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button