Latest

ಏನೆಲ್ಲ ಅಗತ್ಯವೋ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ಕೊರೊನಾ ಮಹಾಮಾರಿಯನ್ನು ಮಣಿಸಲು ರಾಜ್ಯ ಸರಕಾರಗಳಿಗೆ ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಭಾರತ ಸರ್ಕಾರವು ಎಲ್ಲ ನೆರವು ನೀಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ  ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ನಿಯಂತ್ರಸುವ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ನಡೆಸಿದ ಸಚಿವರು, ಸಂಸದರು ಮತ್ತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಸಚಿವರು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು.
ಕೊರೊನಾ ವಿರುದ್ಧದ ಹೋರಾಟದ ವಿಚಾರವಾಗಿ ಕೇಂದ್ರ ಸರ್ಕಾರವು ರಾಜ್ಯಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿದೆ. ಇನ್ನೂ ಏನೆಲ್ಲ ಅಗತ್ಯವೋ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದರು.
“ಔಷಧೋದ್ಯಮವೂ ನನ್ನ ಇಲಾಖೆಯ ಅಧೀನದಲ್ಲಿಯೇ ಬರುತ್ತದೆ. ಹಾಗಾಗಿ ನಾನು ಪ್ರತಿದಿನ ಖುದ್ದಾಗಿ ಔಷಧ ಉತ್ಪಾದನೆ, ವಿತರಣೆ ಹೇಗಾಗುತ್ತಿದೆ ಎಂದು ಪರಿಶೀಲಿಸುತ್ತೇನೆ. ಈ ವಿಚಾರದಲ್ಲಿ ಸದಾ ನಿಗಾ ಇಡಲಾಗುತ್ತದೆ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ  ಹೈಡ್ರೊಕ್ಸಿಕ್ಲೋರೊಕ್ವಿನ್‌, ಪೆರಾಸೆಟಾಮೊಲ್ ಮುಂತಾದ ಔಷಧಗಳು ಸಾಕಷ್ಟು ದಾಸ್ತಾನಿದೆ. ಹಾಗೆಯೇ ದೇಶಾದ್ಯಂತ ಇರುವ ನಮ್ಮ ಇಲಾಖೆಯ ಜನೌಷಧಿ ಕೇಂದ್ರಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಜೀವರಕ್ಷಕ ಔಷಧಗಳು ಲಭ್ಯವಿವೆ. ಕರ್ನಾಟಕ ರಾಜ್ಯವೊಂದರಲ್ಲೇ 600ಕ್ಕಿಂತ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.” ಎಂದು ಶ್ರೀ ಸದಾನಂದ ಗೌಡ ಹೇಳಿದರು.
“ಔಷಧಗಳ ಕೊರತೆ, ಕಾಳಸಂತೆಯಂತಹ ಏನಾದರು ದೂರುಗಳಿದ್ದರೆ ನಮ್ಮ ಜನೌಷಧಿ ಸಹಾಯವಾಣಿ ಸಂಖ್ಯೆ 18001808080 ಅಥವಾ ಎನ್.ಪಿ.ಪಿ.ಎ. ಸಹಾಯವಾಣಿ  18001112550 / 011-23345118 / 011-23345122 ನಂಬರುಗಳಿಗೆ ಕರೆ ಮಾಡಬಹುದು. ಅಥವಾ ಖುದ್ದು ನನ್ನ ಗಮನಕ್ಕೂ ತರಬಹುದು. ಏನೇ ಸಮಸ್ಯೆಯಿದ್ದರೂ ಅದನ್ನು ಇತ್ಯರ್ಥಪಡಿಸಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
“ಅದೇ ರೀತಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ತುರ್ತು ಔಷಧ, ವೈದ್ಯಕೀಯ ಉಪಕರಣಗಳ ಆಮದು ಮಾಡಿಕೊಳ್ಳುವ ವಿಚಾರವಾಗಿ ತೊಡಕುಗಳು ಇದ್ದರೆ ನಮ್ಮ ಇಲಾಖೆಯ ಅಥವಾ ನನ್ನ ಗಮನಕ್ಕೆ ತರಬಹುದು. ಅಗತ್ಯ ಅನುಮತಿಯನ್ನು ಸ್ವಲ್ಪವೂ ವಿಳಂಬವಿಲ್ಲದೆ ದೊರಕಿಸಿಕೊಡಲಾಗುವುದು” ಎಂದೂ ಅವರು ಹೇಳಿದರು.
“ನಾವ್ಯಾರೂ ಇದುವರೆಗೆ ಕಂಡು ಕೇಳರಿಯದ ಮಹಾಮಾರಿ ಕೊರೊನಾ ರೋಗವು ಜಗತ್ತಿನ ಆರೋಗ್ಯ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ನಾವೆಲ್ಲ ಒಟ್ಟಾಗಿ ಸಂಘಟಿತ ಪ್ರಯತ್ನ ಮಾಡಿದಾಗಲೇ ಇದನ್ನು ಮಣಿಸಲು ಸಾಧ್ಯ. ಸಾರ್ವಜನಿಕರೂ ಈ ಹೋರಾಟದಲ್ಲಿ ಕೈಜೋಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ವೈದ್ಯರು ಸೇರಿದಂತೆ ಕೊರೊನಾ ಯೋಧರ ಜತೆ ಎಲ್ಲ ರೀತಿಯಿಂದ ಸಹಕರಿಸಿ ಎಂದು ವಿನಂತಿಸುತ್ತೇನೆ” ಎಂದು ಸದಾನಂದ ಗೌಡ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button