
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ರಸ್ತೆಗಳು ಕೆರೆಗಳಂತಾಗಿದ್ದು, ಮನೆಗಳಿಗೂ ನೀರು ನುಗ್ಗಿದೆ.
ಬೆಂಗಳೂರಿನ ಆರ್.ಟಿ. ನಗರದಲ್ಲಿ ವಿದ್ಯುತ್ ಶಾಕ್ ನಿಂದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. 8 ವರ್ಷದ ಫಾತಿಮಾ ಮೃತಪಟ್ಟ ಬಾಲಕಿ.
ರಾತ್ರಿ 8ಗಂಟೆಯ ಸಮಯದಲ್ಲಿ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ವಿದ್ಯುತ್ ಕಂಬ ಮುಟ್ಟಿ ಶಾಕ್ ಹೊಡೆದು ಅಸುನೀಗಿದ್ದಾಳೆ. ಮಳೆಯಿಂದಾಗಿ ಆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿತ್ತೆನ್ನಲಾಗಿದೆ.
ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ. ದಾಸರಹಳ್ಳಿ ಪ್ರದೇಶಗಳಲ್ಲಿ ಮಳೆ ನೀರು ಹಲವು ಅಪಾರ್ಟ್ಮೆಂಟ್, ಮನೆಗಳಿಗೆ ನುಗ್ಗಿ ಅವಾಂತರಗಳನ್ನು ಸೃಷ್ಟಿಸಿದೆ. ಇದರಿಂದ ನಿವಾಸಿಗಳು ರಾತ್ರಿಯಲ್ಲ ನೀರನ್ನು ಹೊರಹಾಕುವುದರಲ್ಲೇ ಕಾಲ ಕಳೆದಿದ್ದಾರೆ.