ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕಿನ ಬಗ್ಗೆಯೇ ಚರ್ಚೆಯಾಗುತ್ತಿದೆ. ಆರಂಭದಲ್ಲಿ ರಾಜ್ಯದಲ್ಲಿ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದೆ. ಎಲ್ಲರೂ ಬಿಗಿ ನಿಲುವನ್ನು ತಳೆದಾಗ ಮಾತ್ರ ಸೋಂಕು ನಿಯಂತ್ರಣ ಮಾಡಲು ಸಾಧ್ಯ ಹೊರತು ಲಾಕ್ ಡೌನ್ ನಿಂದ ಅಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ, ಇದಕ್ಕೆ ಪರಿಹಾರ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕಟ್ಟುನಿಟ್ಟಾಗಿ ಅಂತರ ಕಾಯ್ದುಕೊಳ್ಳುವುದು. ಕೊರೊನಾ ನಿಯಂತ್ರಣದಲ್ಲಿ ನಾವು ಆರಂಭದಲ್ಲಿ ಯಶಸ್ಸು ಕಂಡಿದ್ದೇವೆ. ಕೊರೊನಾ ನಿಯಂತ್ರಣಕ್ಕಾಗಿ ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ಸ್ ತಮ್ಮ ಜೀವವನ್ನೆ ಮುಡುಪಾಗಿಟ್ಟಿದ್ದಾರೆ ಹೀಗಿರುವಾಗ ನೀವು ಸರ್ಕಾರದ ಕೋವಿಡ್-19 ರೂಲ್ಸ್ ಪಾಲಿಸಲು ಸಾಧ್ಯವಿಲ್ಲವೇ ಎಂದರು.
ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇನ್ನುಮುಂದೆ ಲಾಕ್ ಡೌನ್ ಇರುವುದಿಲ್ಲ. ಅದರಲ್ಲೂ ನಾಳೆಯಿಂದ ಬೆಂಗಳೂರಿನಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ಕಂಟೆನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಮತ್ತೆ ಮತ್ತೆ ಹೇಳುವುದು ಇಷ್ಟೇ. ರಾಜ್ಯದ ಜನತೆ ಮಾಸ್ಕ್ ಧರಿಸಲೇಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಪಾಡಬೇಕು. ತಜ್ನರ ಸಲಹೆ ಮೇರೆಗೆ ನಾವು ಕೊರೊನಾ ನಿಯಂತ್ರಣಕ್ಕೆ 5 T ಸೂತ್ರವನ್ನು ಅನುಸರಿಸುತ್ತಿದ್ದೇವೆ. ಟ್ರೇಸ್,ಟ್ರ್ಯಾಕ್,ಟೆಸ್ಟ್, ಟ್ರೀಟ್ ಮೆಂಟ್, ಟೆಕ್ನಾಲಜಿ ಈ ಸೂತ್ರ ಅನುಸರಿಸುತ್ತಿದ್ದೇವೆ ಎಂದು ಹೇಳಿದರು.
24 ಗಂಟೆಯಲ್ಲಿ ಕೊವಿಡ್ ಟೆಸ್ಟ್ ವರದಿ ಬರುವ ವ್ಯವಸ್ಥೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ಒದಗಿಸಲು ಒಪ್ಪಿವೆ ಎಂದು ತಿಳಿಸಿದರು.
ಕೊರೊನಾ ಪಾಸಿಟೀವ್ ಎಂದಾಕ್ಷಣ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಯಾರೂ ಇಂತಹ ನಿರ್ಧಾರ ಕೈಗೊಳ್ಳಬೇಡಿ ಶೇ.98ರಷ್ಟು ಜನ ಕೊವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಹಾಗಾಗಿ ಕೊರೊನಾ ಸೋಂಕಿನಿಂದ ಗುಣಮುಖರಾಗಬಹುದಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ