Kannada NewsKarnataka NewsLatest

ಲಕ್ಷ್ಮಣ ಸವದಿ ದೆಹಲಿ ಭೇಟಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನವದೆಹಲಿಗೆ ಭೇಟಿ ನೀಡಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಬೆಂಗಳೂರಿನಲ್ಲಿ ರಾಜ್ಯ ಸರಕಾರ ವರ್ಷದ ಸಂಭ್ರಮದಲ್ಲಿದ್ದರೆ ಲಕ್ಷ್ಮಣ ಸವದಿಯವರನ್ನು ಹೈಕಮಾಂಡ್ ರಾಜ್ಯಪಾಲರ ಮೂಲಕ ನವದೆಹಲಿಗೆ ಕರೆಸಿಕೊಂಡಿದೆ. ಭಾನುವಾರ ಸಂಜೆ ಸವದಿ ದೆಹಲಿಗೆ ತೆರಳಿದ್ದಾರೆ.

ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬದಲಿ ನಾಯಕರನ್ನು ಕೂಡ್ರಿಸುವ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಸವದಿಯವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ರಾಜ್ಯ ಸರಕಾರದಿಂದ ಕೊರೋನಾ ಸಾಮಗ್ರಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿವರವನ್ನು ಸಚಿವರೊಬ್ಬರೇ ವಿರೋಧ ಪಕ್ಷದ ನಾಯಕರಿಗೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಲಕ್ಷ್ಮಣ ಸವದಿ ದೆಹಲಿ ಭೇಟಿ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಅವರು ಅವರ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕೆ ಹೋಗಿದ್ದಾರೆ. ವಿಶೇಷವೇನೂ ಇಲ್ಲ ಎಂದಿದ್ದಾರೆ.

ಯಡಿಯೂರಪ್ಪ ಮುಂದಿನ ಎರಡೂವರೆ ವರ್ಷ ಮುಂದುವರಿಯಲಿದ್ದಾರೆ. ಮುಂದಿನ 2023ರ ಚುನಾವಣೆಯೂ ಯಡಿಯೂರಪ್ಪ ನೇತೃತ್ವದಲ್ಲೇ ನಡೆಯಲಿದೆ ಎಂದೂ ಜಾರಕಿಹೊಳಿ ಹೇಳಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ಬದಲಿ ನಾಯಕತ್ವಕ್ಕೆ ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ಅವರ ಹೆಸರು ಹೈಕಮಾಂಡ್ ಗಮನದಲ್ಲಿದೆ ಎಂದೂ ವದಂತಿ ಹಬ್ಬಿದೆ.

ಲಕ್ಷ್ಮಣ ಸವದಿ ಶಾಸಕಸ್ಥಾನವನ್ನು ಸೋತರೂ ಅವರನ್ನು ಮಂತ್ರಿ ಮಾಡಿ, ಉಪಮುಖ್ಯಮಂತ್ರಿ ಮಾಡಿ, ಇದೀಗ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ನವದೆಹಲಿಗೆ ಹೈಕಮಾಂಡ್ ಕರೆಸಿಕೊಂಡಿದೆ ಎಂದರೆ ಪರ್ಯಾಯ ನಾಯಕರನ್ನಾಗಿ ಅಮಿತ್ ಶಾ ಸವದಿ ಅವರನ್ನು ಗುರುತಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಮಿತ್ ಶಾಗೆ ಮತ್ತಷ್ಟು ಹತ್ತಿರವಾದರೇ ಲಕ್ಷ್ಮಣ ಸವದಿ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button