
ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ರಾಜ್ಯದ ಮೂಲೆ ಮೂಲೆಯಲ್ಲೀ ಕೊರೊನಾ ಸೋಂಕು ಹೆಚ್ಚುತ್ತಿದೆ. ಈ ನಡುವೆ ಹಲವೆಡೆ ಮದುವೆ ಸಮಾರಂಭಗಳೂ ನಡೆದಿವೆ. ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 32 ವರ್ಷದ ಯುವಕ ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವಕನ ಸಾವಿಗೆ ಆರೋಗ್ಯ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರದ ಹಿಂದಷ್ಟೇ ಯುವಕನ ತಾಯಿ ಸಾವನ್ನಪ್ಪಿದ್ದು, ಇದೀಗ ಮಗ ಕೂಡ ತೀರಿಕೊಂಡಿದ್ದಾರೆ. ಈ ಮೂಲಕ ಒಂದೇ ವಾರದಲ್ಲಿ ಒಂದೇ ಮನೆಯಲ್ಲಿ ಇಬ್ಬರು ಕೋವಿಡ್ 19ಗೆ ಬಲಿಯಾದಂತಾಗಿದೆ. ಮೃತ ಯುವಕನ ತಂದೆ ಕೂಡ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾರದ ಹಿಂದೆಯೇ ಯುವಕನ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಆದರೆ ವರದಿ ಇನ್ನೂ ಬಂದಿರಲಿಲ್ಲ. ಶನಿವಾರ ರಾತ್ರಿಯಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಯುವಕನಿಗಾಗಿ ಸ್ಥಳೀಯರು ಭಾನುವಾರ ಬೆಳಗ್ಗೆಯಿಂದಲೇ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬಂದದ್ದು ಮಾತ್ರ ಮಧ್ಯಾಹ್ನ 1 ಗಂಟೆಗೆ. ಅದರಲ್ಲೂ ವೆಂಟಿಲೇಟರ್ ಇರಲಿಲ್ಲ. ಆಸ್ಪ್ತ್ರೆಗೆ ದಾಖಲಾಗುತ್ತಿದ್ದಂತೆಯೇ ಯುವಕ ಸಾವನ್ನಪ್ಪಿದ್ದಾನೆ. ಯುವಕನ ಸಾವಿನ ಬಳಿಕ ಸಿಬ್ಬಂದಿ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. ಅಂಬುಲೆನ್ಸ್ ತಡವಾಗಿ ಬಂದಿದ್ದೇ ಯುವಕನ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.