Kannada NewsKarnataka NewsLatest

ಸ್ಮಾರ್ಟ್ ಸಿಟಿ ಕಾಮಗಾರಿ: ತಾಂತ್ರಿಕ ಸಮಸ್ಯೆ ಪರಿಹರಿಸಲು ಸಚಿವ ಅಂಗಡಿ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆ ಆಗಿದೆ. ಆದರೆ ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರ ವಿಳಂಬ ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾಮಗಾರಿ ವ್ಯಾಪ್ತಿಯ ಖಾಸಗಿ ಆಸ್ತಿಗಳ ಸ್ವಾಧೀನ ಮತ್ತು ಜಮೀನು ಹಸ್ತಾಂತರ ಸೇರಿದಂತೆ ಎಲ್ಲ ಬಗೆಯ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೋಮವಾರ (ಜು.27) ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ಕಾಮಗಾರಿಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿಗಳ ಮೌಲ್ಯಮಾಪನ ಮಾಡಿ ಪುನರ್ವಸತಿ ಅಥವಾ ಸ್ಥಳಾಂತರದ ಬಗ್ಗೆ ವರದಿ ನೀಡಿದರೆ ರಾಜ್ಯ ಸರ್ಕಾರದ ಜತೆ ಚರ್ಚಿಸಿ ಅಗತ್ಯ ಅನುದಾನ ಪಡೆಯಲಾಗುವುದು ಎಂದು ಹೇಳಿದರು.
ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು. ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮೂವತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯಗಳನ್ನು ಒದಗಿಸಲು ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು.

ಕಾಮಗಾರಿ ತ್ವರಿತಗೊಳಿಸಲು ಸೂಚನೆ:

ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯವಿರುವ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಹೇಳಿದರು.
ಇದೇ ವೇಳೆ ಮಾತನಾಡಿದ ಎಂ.ಎಲ್.ಐ.ಆರ್.ಸಿ. ಯ ಬ್ರಿಗೇಡಿಯರ್ ಚೌಧರಿ, ಬಸ್ ನಿಲ್ದಾಣಕ್ಕೆ ಜಮೀನನ್ನು ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವ ರಕ್ಷಣಾ ಇಲಾಖೆಗೆ ಕಳಿಸಲಾಗಿದ್ದು, ಅಲ್ಲಿಂದ ಅನುಮೋದನೆ ದೊರೆಯಬೇಕಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುಕೂಲವಾಗುವಂತೆ ಪ್ರಸ್ತಾವ ಸಿದ್ಧಪಡಿಸಲಾಗುವುದು. ಬಸ್ ನಿಲ್ದಾಣದ ಜಮೀನು ಹಸ್ತಾಂತರ ಹೊರತುಪಡಿಸಿದರೆ ಇದುವರೆಗೆ ರಾಜ್ಯ ಸರ್ಕಾರಕ್ಕೆ ಕಳಿಸಿದ ಯಾವುದೇ ಪ್ರಸ್ತಾವ ಬಾಕಿ ಉಳಿದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರು ಮಾತನಾಡಿ, ಸಾಂವಗಾಂವ ರಸ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಪ್ರಸ್ತಾವ ರಕ್ಷಣಾ ಇಲಾಖೆಗೆ ಸಲ್ಲಿಸುವಂತೆ ಬ್ರಿಗೇಡಿಯರ್ ಅವರನ್ನು ಕೋರಿದರು.
ಬೆಳಗಾವಿ ನಗರದ ಜನರ ಅನುಕೂಲ ಕಲ್ಪಿಸಲು ರೂಪಿಸಲಾಗುವ ರಸ್ತೆ ಮತ್ತಿತರ ಮೂಲಸೌಕರ್ಯ ಯೋಜನೆಗೆ ಸಕಾರಾತ್ಮಕ ವರದಿಯನ್ನು ಕಳಿಸಬೇಕು. ಅಂದಾಗ ಮಾತ್ರ ಯೋಜನೆ ಅನುಷ್ಠಾನ ವೇಗ ಪಡೆದುಕೊಳ್ಳಲಿದ್ದು, ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದರು.

ವರದಿ ಸಲ್ಲಿಸಲು ಜಿಲ್ಲಾಧಿಕಾರಿ ನಿರ್ದೇಶನ:

ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿದಾರರ ಪುನರ್ವಸತಿ ಮತ್ತು ಸ್ಥಳಾಂತರ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಬಸ್ ನಿಲ್ದಾಣ ಬಳಿಯ ಜಮೀನು ಹಸ್ತಾಂತರ; ರಾಯಚೂರು-ಬಾಚಿ ರಸ್ತೆ (ಎಸ್.ಎಚ್.20) ಗಾಂಧಿನಗರದಿಂದ ಅಶೋಕ ವೃತ್ತದವರೆಗೆ ರಸ್ತೆ ನಿರ್ಮಾಣ; ಸಂಚಯನಿ ವೃತ್ತದಿಂದ ಮೀನು ಮಾರ್ಕೆಟ್ ವರೆಗೆ ಸ್ಮಾರ್ಟ್ ಸಿಟಿ ರಸ್ತೆ ನಿರ್ಮಾಣ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಉಪ ವಿಭಾಗಾಧಿಕಾರಿ ಅಶೋಕ ತೇಲಿ ಅವರು ಸೇರಿದಂತೆ ಸ್ಮಾರ್ಟ್ ಸಿಟಿ, ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button