Latest

ರಾಜಿನಾಮೆಗೆ ಸಿದ್ದ -ಸಿಎಂ ಹೇಳಿಕೆಯಿಂದ ಸಮ್ಮಿಶ್ರ ಸರಕಾರದಲ್ಲಿ ದೊಡ್ಡ ಸಂಚಲನ

 

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಕಾಂಗ್ರೆಸ್ ಶಾಸಕರನ್ನು ಪಕ್ಷದ ಮುಖಂಡರು ನಿಯಂತ್ರಿಸಬೇಕು. ಒಂದೊಮ್ಮೆ ನಮ್ಮ ಸರಕಾರದ ಕಾರ್ಯ ವೈಖರಿ ಬಗ್ಗೆ ಕಾಂಗ್ರೆಸ್ ನವರಿಗೆ ಸಮಾಧಾನವಿಲ್ಲದಿದ್ದರೆ ನಾನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಎಚ್ಚರಿಕೆ ನೀಡಿದ್ದು, ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರು ನೀಡುತ್ತಿರುವ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಹಾಗೂ ಉಪಮುಖ್ಯಮಂತ್ರಿ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ನಾನು ರಾಜಿನಾಮೆ ನೀಡಲು ಸಿದ್ಧನಿದ್ದೇನೆ. ಅವರ ಶಾಸಕರನ್ನು ಅವರೇ ನಿಯಂತ್ರಿಸಬೇಕು ಎಂದು ಖಡಕ್ ಆಗಿ ಹೇಳಿದರು.

ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್, ‘ಸಿದ್ದರಾಮಯ್ಯ ಅವರೇ  ನಮ್ಮ ನಾಯಕರು. ಬೆಂಗಳೂರಿನ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಅವರು ಇದ್ದಾಗ ಸಾಕಷ್ಟು ಅಭಿವೃದ್ಧಿಯಾಗಿತ್ತು. ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಈಗಿನ ಮೈತ್ರಿ ಸರ್ಕಾರ ಏಳು ತಿಂಗಳು ಪೂರೈಸಿದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರು ಸೋಲಲು ಕೆಲವರ ಪಿತೂರಿಯೇ ಕಾರಣ’ ಎಂದು ಬಹಿರಂಗ ಸಭೆಯಲ್ಲೇ ಹೇಳಿದ್ದರು. 

ಸಚಿವ ಸಿ ಪುಟ್ಟರಂಗ ಶೆಟ್ಟಿ,ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನಾಸೆ’ ಎಂದಿದ್ದರು. ‘ನನಗೆ ಯಾವತ್ತಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ನಾನು ಅವರ ಋಣದಲ್ಲಿದ್ದೇನೆ. ಅವರಿಂದಲೇ ನಾನು ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನಾಸೆ’ ಎಂದೂ ಅವರು ಹೇಳಿದ್ದರು.

ಸಚಿವ ಎಂಟಿಬಿ ನಾಗರಾಜ ಸಹ ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಿತ್ತು. ನನಗೆ ಮಂತ್ರಿಯಾಗಬೇಕು ಎಂಬ ಕನಸಿತ್ತು. ಅದನ್ನು ಸಿದ್ದರಾಮಯ್ಯ ಅವರೇ ನನಸು ಮಾಡಿದ್ದಾರೆ’ ಎಂದಿದ್ದರು.

ಈ ಎಲ್ಲ ಹೇಳಿಕೆಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ಅವರು ಇದೇ ರೀತಿ ಮಾತನಾಡುತ್ತಿದ್ದರೆ ನಾನು ಹುದ್ದೆಯಿಂದ ನಿರ್ಗಮಿಸುವುದಾಗಿ ಹೇಳಿದರು.

ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, “ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಕರೆಯುತ್ತಾರೆ. ಅವರು ನಿಜವಾಗಿಯೂ ಅತ್ಯುತ್ತಮ ಮುಖ್ಯಮಂತ್ರಿಯಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರು. ಶಾಸಕರಿಗೆ ಅವರೇ ಮುಖ್ಯಮಂತ್ರಿ. ಹಾಗಾಗಿ ಅವರ ಅಭಿಪ್ರಾಯ ಹೇಳಿದ್ದಾರೆ. ಅದರಲ್ಲಿ ತಪ್ಪೇನು? ” ಎಂದು ಪ್ರಶ್ನಿಸಿದ್ದಾರೆ. 

ಸಚಿವ ಎಂ.ಬಿ.ಪಾಟೀಲ ಮಂಗಳೂರಿನಲ್ಲಿ ಮಾತನಾಡಿ, ಸಮ್ಮಿಶ್ರ ಸರಕಾರ ಎಂದ ಮೇಲೆ ಹೊಂದಾಣಿಕೆಯಿಂದ ಹೋಗಬೇಕಾಗುತ್ತದೆ ಎಂದು ಮುಖ್ಯಮಂತ್ರಿಗೇ ಕಿವಿಮಾತು ಹೇಳಿದ್ದಾರೆ. 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ನಮ್ಮ ಶಾಸಕರನ್ನು ನಾವೇ ನಿಯಂತ್ರಿಸಬೇಕು. ಜೆಡಿಎಸ್ ನವರು ನಿಯಂತ್ರಿಸಲು ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ವಿಶೇಷವೆಂದರೆ ಕಾಂಗ್ರೆಸ್ ಶಾಸಕರ ಹೇಳಿಕೆಯನ್ನು ಇವರ್ಯಾರೂ ನೇರವಾಗಿ ಖಂಡಿಸಲಿಲ್ಲ. ಇದು ಕುಮಾರಸ್ವಾಮಿಯವರನ್ನು ಇನ್ನಷ್ಟು ಕೆರಳಿಸಿದೆ. ಹಾಗಾಗಿಯೇ ರಾಜಿನಾಮೆ ಮಾತುಗಳನ್ನಾಡಿದ್ದಾರೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ ಮಾತ್ರ, ಶಾಸಕರು ಸಮ್ಮಿಶ್ರ ಸರಕಾರದ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಬಾರದು ಎದಿದ್ದಾರೆ. ಈ ಬಗ್ಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕೂಡ ಶಾಸಕ ಸೋಮಶೇಖರ್ ಗೆ ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ. 

ಬಿಜೆಪಿ ಜೊತೆಗೇ ಉತ್ತಮವಿತ್ತು

ಈ ಮಧ್ಯೆ ಸಚಿವ ಪುಟ್ಟರಾಜು ಮತ್ತೊಂದು ಡ್ಯಾಮೇಜಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಬಿಜೆಪಿ ಜೊತೆಗಿನ ಸಮ್ಮಿಶ್ರ ಸರಕಾರವೇ ಚೆನ್ನಾಗಿತ್ತು. ಆಗ ಅವರ ಹಸ್ತಕ್ಷೇಪವಿರಲಿಲ್ಲ. ಎಲ್ಲದಕ್ಕೂ ಸಹಕಾರವಿತ್ತು. ಕಾಂಗ್ರೆಸ್ ನವರೇ ಸರಕಾರ ರಚಿಸುವಂತೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ನಾವೇನು ಕೇಳಿರಲಿಲ್ಲ. ಬೇಷರತ್ ಬೆಂಬಲ ಎಂದು ಹೇಳಿ ಈಗ ಕಾಂಗ್ರೆಸ್ ನವರು ಪ್ರತಿಯೊಂದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಕುರಿತು ಜೆಡಿಎಸ್ ಕಚೇರಿಯಲ್ಲಿ ಗಂಭೀರ ಚರ್ಚೆ ನಡೆದಿದೆ. ಕಚೇರಿಯಲ್ಲಿ ಸೇರಿರುವ ಮುಖಂಡರು ಹಾಗೂ ಕಾರ್ಯಕರ್ತರು ಹೇಳಿಕೆ ಕುರಿತು ಚರ್ಚಿಸುತ್ತಿದ್ದಾರೆ.

ಈ ಎಲ್ಲ ಬೆಳವಣಇಗೆ ಕುರಿತು ಬಿಜೆಪಿ ಮುಖಂಡರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಮಾಜಿ ಸಂಸದೆ ತೇಜಸ್ವಿನಿ ಹೇಳಿಕೆ ನೀಡಿ, ಮುಖ್ಯಮಂತ್ರಿಗಳು ಮಾನ ಮರ್ಯಾದೆ ಇದ್ದರೆ ರಾಜಿನಾಮೆ ನೀಡಿ ಹೊರಗೆ ಬರಬೇಕು. ಪದೇ ಪದೆ ರಾಜಿನಾಮೆ ನೀಡುವುದಾಗಿ ಹೇಳಿಕೆ ನೀಡುತ್ತ ಅಲ್ಲೇ ಇರುವುದು ಸರಿಯಲ್ಲ ಎಂದಿದ್ದಾರೆ. ಕಾಂಗ್ರೆಸ್ ಹಂಗಿನಿಂದ ಹೊರಗೆ ಬಂದು ಚುನಾವಣೆ ಎದುರಿಸುವುುದೊಳಿತು ಎಂದು ಬಿಜೆಪಿ ಹೇಳಿದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button