ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯ ಆರನೇ ಕಂತಿನ ಹಣವಾಗಿ 17,100 ಕೋಟಿ ರೂಪಾಯಿ ಹಣವನ್ನೂ ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ವಿಡಿಯೋ ಕಾನ್ಫೆರೆನ್ಸ್ನಲ್ಲಿ ಕೃಷಿ ಸೌಕರ್ಯ ನಿಧಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಪಿಎಂ ಕಿಸಾನ್ ಯೋಜನೆಯ ಆರನೇ ಕಂತಿನ ಹಣ ಬಿಡುಗಡೆ ಮಾಡಿದರು.
ಕೃಷಿ ಸೌಕರ್ಯ ನಿಧಿಯನ್ನು ಕೃಷಿ ಕ್ಷೇತ್ರದ ಉದ್ಯಮಿಗಳು, ಸ್ಟಾರ್ಟಪ್ಗಳು, ರೈತ ಸಂಸ್ಥೆಗಳ ಉತ್ತೇಜನಕ್ಕೆಂದು ಸ್ಥಾಪಿಸಲಾಗಿದೆ. ಕಟಾವು ನಂತರದ ಬೆಳೆ ನಿರ್ವಹಣೆಯ ಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಉದ್ದೇಶವನ್ನು ಕೂಡ ಹೊಂದಿದೆ.
ಇದೇ ವೇಳೆ ಪ್ರಧಾನಿ ಮೋದಿ ರಾಜ್ಯದ ರೈತರ ತಂಡದ ಜತೆ ವಿಡಿಯೋ ಸಂವಾದ ನಡೆಸಿದರು. ಹಾಸನದ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯರೊಂದಿಗೆ ಮಾತನಾಡಿದ ಪ್ರಧಾನಿ, ಸಂಘದಿಂದ ರೈತರಿಗೆ ನೀಡುವ ನೆರವು, ವ್ಯವಸ್ಥೆ ಮೊದಲಾದವುಗಳ ಬಗ್ಗೆ ಮಾಹಿತಿ ಪಡೆದರು.
ಕೃಷಿಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಸವೇಗೌಡ ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದು, 44 ವರ್ಷದಿಂದ ಅಸ್ತಿತ್ವದಲ್ಲಿರುವ ತಮ್ಮ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ವಹಿವಾಟು 50 ಕೋಟಿ ರೂ ಇದ್ದು, 22 ಗ್ರಾಮಗಳ 2,300 ರೈತರಿಗೆ ನೆರವಾಗುತ್ತಿದೆ. ಇಲ್ಲಿ ಮೆಕ್ಕೆ ಜೋಳ, ಶುಂಟಿ, ಆಲೂಗಡ್ಡೆ, ಅಡಿಕೆ ಮೊದಲಾದ ಬೆಳೆಗಳನ್ನ ಬೆಳೆಯಲಾಗತ್ತಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ