Latest

 ಐದು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ!

ನನ್ನ ಪಾಲಿಗೆ ಡಾ. ಅನ್ವಯ  ಮುಳೆ ದೇವರು- ಸಲೀಮ್

 ಪ್ರಗತಿವಾಹಿನಿ ಸುದ್ದಿ, ಮುಂಬೈ: ಸಲೀಮ್ ಖಾನ್ (ಹೆಸರು ಬದಲಾಯಿಸಲಾಗಿದೆ) ಐದು ವರ್ಷಗಳ ಹಿಂದೆ ತನ್ನ 22 ನೆ ವಯಸ್ಸಿನಲ್ಲಿ  ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ.
47 ವರ್ಷಗಳ ಹಿಂದೆ ಮುಂಬಯಿ ಪಾಲಿಕೆಯ ಕೆಇಎಂ ಆಸ್ಪತ್ರೆಯಲ್ಲಿ ಇಂಥದ್ದೇ ರೀತಿಯಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸಲಾಗಿತ್ತು. ಆದರೆ ಆ ಪ್ರಯತ್ನ ಯಶಸ್ವಿಯಾಗಿರಲಿಲ್ಲ.
ಆದರೆ ನಾಲ್ಕು ದಶಕಗಳ ನಂತರ, ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಅನ್ವಯ ಮುಳೆ ಮುಲುಂಡ್‌ನ ಫೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾದರು.

    ಕಸಿಗಾಗಿ ಬ್ರೇನ್ ಡೆಡ್ ರೋಗಿಯ ಹೃದಯ

ನಿಯಮಿತ ಕೆಲಸ ಮತ್ತು ವ್ಯಾಯಾಮ ಮಾಡುತ್ತಿರುವ ಸಲೀಮ್ ಗೆ ಈಗ 27 ವರ್ಷ. ಯಾವುದೇ ಕ್ಷಣದಲ್ಲಿ ಸಲೀಮ್ ನ ಹೃದಯ ಬಡಿತ ನಿಲ್ಲುವ ಪರಿಸ್ಥಿತಿ ಇತ್ತು. ಬದುಕುಳಿದಿರಲು ಒಂದೇ ಮಾರ್ಗ ಹೃದಯ ಕಸಿ. ಶಸ್ತ್ರಚಿಕಿತ್ಸೆಗೆ ಬ್ರೇನ್ ಡೆಡ್ ರೋಗಿಯ ಹೃದಯ ಪಡೆಯುವ ಪ್ರಯತ್ನ ನಡೆದಿತ್ತು.ಅಂತಿಮವಾಗಿ, ಪುಣೆಯ ಜಹಾಂಗೀರ್ ಆಸ್ಪತ್ರೆಯಲ್ಲಿಯ ಬ್ರೇನ್ ಡೆಡ್ ರೋಗಿಯ ಹೃದಯ ಸಲಿಮ್ ನಿಗೆ ಕಸಿ ಮಾಡುವುದು ನಿಶ್ಚಿತವಾಗುತ್ತಲೇ ಮುಳೆ ಅವರ ತಂಡ ಕೆಲಸ ಪ್ರಾರಂಭಿಸಿತು.

ಶಸ್ತ್ರಚಿಕಿತ್ಸೆಯ ರೋಮಾಂಚನಕಾರಿ ಪ್ರಯಾಣ

ಪುಣೆಯಿಂದ ಬ್ರೇನ್ ಡೆಡ್ ರೋಗಿಯ ಹೃದಯವನ್ನು ತೆಗೆದು ಸಮಯಕ್ಕೆ ಮುಂಬಯಿಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸುವುದು ಒಂದು ದೊಡ್ಡ ಸವಾಲಾಗಿತ್ತು. ಈ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ‘ಕೆಲಸ, ಸಮಯ ಮತ್ತು ವೇಗ’ದ ಗಣಿತವೂ ಅಷ್ಟೇ ಮುಖ್ಯವಾಗಿದ್ದು ಅದಕ್ಕಾಗಿ ಹೆಚ್ಚಿನ ತಯಾರಿ ನಡೆಸಬೇಕಾಗುತ್ತದೆ. ಪುಣೆ ಪೊಲೀಸರು ಮತ್ತು ಮುಂಬೈ ಟ್ರಾಫಿಕ್ ಪೊಲೀಸರು ಈ ಜವಾಬ್ದಾರಿಯನ್ನು ವಹಿಸಿಕೊಂಡರು.

ಗ್ರೀನ್ ಕಾರಿಡಾರ್ ರಚನೆ

 ಹೃದಯವನ್ನು ಪುಣೆಯಿಂದ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬಯಿಗೆ ತರಲು ಗ್ರೀನ್ ಕಾರಿಡಾರ್ ರಚಿಸಲಾಯಿತು. ಮಧ್ಯಾಹ್ನ 2.38ಕ್ಕೆ ಪುಣೆಯ ಜಹಾಂಗೀರ್ ಆಸ್ಪತ್ರೆಯಲ್ಲಿ ದಾನಿಯ ಹೃದಯದೊಂದಿಗೆ ಹೊರಟ ವೈದ್ಯರ ತಂಡವು ಕೇವಲ ಏಳು ನಿಮಿಷಗಳಲ್ಲಿ ಪುಣೆ ವಿಮಾನ ನಿಲ್ದಾಣಕ್ಕೆ ತಲುಪಿತು. ಅಲ್ಲಿಂದ ಏರ್ ಆಂಬುಲೆನ್ಸ್ ಮೂಲಕ ಅರ್ಧ ಗಂಟೆಯಲ್ಲಿ ಮುಂಬಯಿ ಸಾಂತಾಕ್ರೂಜ್ ವಿಮಾನ ನಿಲ್ದಾಣಕ್ಕೆ ಬಂದರು. ಮುಂಬೈ ಟ್ರಾಫಿಕ್ ಪೊಲೀಸ್ ಮುಖ್ಯಸ್ಥ ಮಿಲಿಂದ್ ಭಾರಂಬೇ ಅವರು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಟ್ರಾಫಿಕ್ ಮುಕ್ತಗೊಳಿಸಲಾಗಿತ್ತು. ದಾರಿಯುದ್ದಕ್ಕೂ ಎಲ್ಲಾ ಸಿಗ್ನಲ್ ಗಳನ್ನು ಹಸಿರು ಬಣ್ಣಕ್ಕೆ ತಿರುಗಿಸಲಾಗಿತ್ತು. ದಾರಿಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಟ್ರಾಫಿಕ್ ಪೊಲೀಸರ ಬೈಕ್ ಮತ್ತು ಜೀಪ್ ,ಆಂಬುಲೆನ್ಸ್ ಮುಂದೆ ಓಡುತ್ತಿದ್ದವು. ಗ್ರೀನ್ ಕಾರಿಡಾರ್‌ಗಾಗಿ 150 ಪೊಲೀಸರು ಕಾರ್ಯ ನಿರ್ವಹಿಸಿದ್ದರು. ಶಸ್ತ್ರಚಿಕಿತ್ಸೆಗೆ ಇಂತಹ ವ್ಯವಸ್ಥೆ ಮಾಡಿರುವುದು ಇದೇ ಮೊದಲು.
ಮುಂಬಯಿ ವಿಮಾನ ನಿಲ್ದಾಣದ ರನ್ವೇಯಲ್ಲಿ ಹೃದಯದೊಂದಿಗೆ ಬರುವ ವೈದ್ಯರ ತಂಡಕ್ಕಾಗಿ ಆಂಬ್ಯುಲೆನ್ಸ್ ಕಾಯುತ್ತಿತ್ತು. ವೈದ್ಯರು ಕೇವಲ ಹದಿನೆಂಟು ನಿಮಿಷಗಳಲ್ಲಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಬಂದರು, ಮತ್ತು ನಾಲ್ಕು ಗಂಟೆಗೆ ಸರಿಯಾಗಿ ಡಾ. ಅನ್ವಯ ಮುಳೆ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದರು. ಶಸ್ತ್ರಚಿಕಿತ್ಸೆ ಸುಮಾರು ಐದು ಗಂಟೆಗಳ ಕಾಲ ನಡೆಯಿತಲ್ಲದೆ  ಸಲಿಮ್ ನಿಗೂ ಹೊಸ ಹೃದಯದೊಂದಿಗೆ ನವ ಜೀವನ ಸಿಕ್ಕಿತು.
ಮುಂಬೈನಲ್ಲಿ ನಡೆದ ಈ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಐದು ವರ್ಷ ಪೂರ್ಣಗೊಂಡಿವೆ. ಏತನ್ಮಧ್ಯ ಡಾ. ಮುಳೆ ಅವರು 110 ಯಶಸ್ವಿ ಹೃದಯ ಕಸಿ, 4,000 ಕ್ಕೂ ಹೆಚ್ಚು ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಮೂರೂವರೆ ವರ್ಷದ ಆರಾಧ್ಯ ಸೇರಿದಂತೆ ಹದಿನೆಂಟು ಮಕ್ಕಳ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ. ಇದರಲ್ಲಿ ಒಂದೇ ದಿನದಲ್ಲಿ ಎರಡು ಹೃದಯ ಕಸಿ ಶಸ್ತ್ರಚಿಕಿತ್ಸೆ ಒಳಗೊಂಡಿದ್ದು ಭಾರತದಲ್ಲಿಯೇ ಈ ರೀತಿಯ ಕಸಿ  ಮೊದಲನೆಯದ್ದಾಗಿದೆ. ಮೂರೂವರೆ ವರ್ಷದ ಆರಾಧ್ಯನಿಗೆ ಒಂದೂವರೆ ವರ್ಷದ ಬಾಲಕನ  ಹೃದಯ ಕಸಿಗಾಗಿ ಲಭ್ಯವಾಗಿತ್ತು. ಡಾ. ಮುಳೆ ಅವರ ಇಡೀ ತಂಡವು ಇಂದು ಮುಂಬೈನ ಹರ್ಕಿಸನ್ ದಾಸ್ ಅಂಬಾನಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇಂದು ಮುಂಬಯಿ ನಿವಾಸಿ ಸಲೀಮ್ ನಲ್ಲಿ ಅಭಿಪ್ರಾಯ ಕೇಳಿದಾಗ, ಈತ ಹೇಳುವ ಮಾತು  ಒಂದೇ… ನನ್ನ ಪಾಲಿಗೆ ಡಾ. ಅನ್ವಯ ಮುಳೆ ದೇವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button