ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ “ಜ್ಞಾನ ಸಂಗಮ”ದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ವಿ ತಾ ವಿ ಯ ಮಾನ್ಯ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ವೇಳೆ ಮಾತನಾಡಿದ ಕುಲಪತಿಗಳು ಸ್ವಾತಂತ್ರ್ಯ ಉತ್ಸವದ ಶುಭಾಶಯಗಳನ್ನು ತಿಳಿಸಿದರು.
ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿರುವ ಎಲ್ಲ ಕೋವಿಡ್ ವಾರಿಯರ್ಸ್ಗಳಿಗೆ ಧನ್ಯವಾದಗಳನ್ನ ತಿಳಿಸಿದರು.
ರಾಷ್ಟ್ರದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಆಗುತ್ತಿದ್ದು ಸಮಾಜದಲ್ಲಿ ಧನಾತ್ಮಕ ಬೆಳವಣಿಗೆ ಆಗಬೇಕೆಂದರೆ ಹಾಗೂ ಸಮಾಜ ಐಕ್ಯತೆ ಹಾಗೂ ಸಾಮರಸ್ಯದಿಂದ ಇರಲು ಶಿಕ್ಷಣ ಕ್ಷೇತ್ರವೇ ಪರಿಣಾಮಕಾರಿ ಮಾದ್ಯಮ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಇರುವ ನಾವು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡಬೇಕು ಹಾಗೂ ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದು ಇದರ ಪರಿಣಾಮಕಾರಿ ಜಾರಿಗೆಯಲ್ಲಿ ಶಿಕ್ಷಕರ ಪಾತ್ರದ ಜೊತೆಗೆ ಪೋಷಕರ ಪಾತ್ರವು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಜಾಗತಿಕ ಬದಲಾವಣೆ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು ಪ್ರಮುಖ ಅಂಗಗಳಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಇವತ್ತು ಇಡೀ ವಿಶ್ವ ಕರೋನಾ ಮಹಾಮಾರಿಯಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಪರಿಸ್ಥಿತಿ ಜಗತ್ತಿಗೆ ಅನೇಕ ಪಾಠಗಳನ್ನು ಕಲಿಸಿ ಹೊಸದಾದ ಸಾಮಾನ್ಯ ರೀತಿಯ ಬದುಕನ್ನು ನಿಭಾಯಿಸಲು ಕಾರಣವಾಗಿದೆ ಹಾಗೂ ಈ ಸಂಧರ್ಭದಲ್ಲಿ ದೇಶದ ಜವಾಬ್ದಾರಿ ನಾಗರೀಕರಾದ ನಾವುಗಳು ಒಬ್ಬ ಗೃಹಿಣಿಯಿಂದ ವಿಜ್ಞಾನಿ ವರೆಗೆ ನಮ್ಮ ನಮ್ಮ ಕ್ಷೇತ್ರದಲ್ಲಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ನಮ್ಮ ರಾಷ್ಟ್ರ ಇನ್ನೂ ಅನೇಕ ಕ್ಷೇತ್ರದಲ್ಲಿ ಸ್ವಾವಲಂಬಿ ಸಾಧಿಸಬೇಕಿದೆ ಆ ನಿಟ್ಟಿನಲ್ಲಿ “ಆತ್ಮನಿರ್ಭರ ಭಾರತ” ಅಡಿಪಾಯದ ಮೇಲೆ ನಾವುಗಳು ಕಾರ್ಯಪ್ರವೃತ್ತರಾಗಬೇಕಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ವಿ ತಾ ವಿ ಕುಲಸಚಿವರಾದ ಪ್ರೊ. ಎ. ಎಸ್. ದೇಶಪಾಂಡೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸತೀಶ ಅಣ್ಣಿಗೇರಿ, ಹಣಕಾಸು ಅಧಿಕಾರಿ ಶ್ರೀಮತಿ ಎಂ. ಎ. ಸಪ್ನಾ, ಸ್ಥಾನಿಕ ಅಭಿಯಂತರ ಶ್ರೀ. ಹೇಮಂತಕುಮಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎ.ಜಿ.ಬುಜುರ್ಕೆ, ವಿಶೇಷಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ