Kannada NewsKarnataka NewsLatest

ಆಗಲೇ ಪುನರ್ವಸತಿ ಕೇಂದ್ರ ಆರಂಭಿಸಿದ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ದಂಡೆಯ ವಿವಿಧ ಊರುಗಳಲ್ಲಿ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಗಲೇ ಪುನರ್ವಸತಿ ಕೇಂದ್ರ ಆರಂಭಿಸಿದ್ದಾರೆ.

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ಮಳೆಯಿಂದಾಗಿ ನೆರೆಯ ಭೀತಿ ಅನುಭವಿಸುತ್ತಿರುವ ಘಟಪ್ರಭಾ ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
 ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿರುವುದಾಗಿ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಬಳೋಬಾಳ, ಬೀರನಗಡ್ಡಿ, ಮಸಗುಪ್ಪಿ, ವಡೇರಹಟ್ಟಿ, ಹುಣಶ್ಯಾಳ ಪಿಜಿ, ಪಟಗುಂದಿ, ನಲ್ಲಾನಟ್ಟಿ, ಮುನ್ಯಾಳ, ಹಡಗಿನಾಳ, ರಂಗಾಪೂರ ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರಾಶ್ರಿತ ಕುಟುಂಬಗಳಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ೧೫೦೦ ಕ್ಕೂ ನಿರಾಶ್ರಿತರು ಪುನರ್ವಸತಿ ಕೇಂದ್ರಗಳಲ್ಲಿ ವಾಸವಿದ್ದಾರೆ. ನಿರಾಶ್ರಿತ ಕುಟುಂಬಗಳಿಗೆ ಮಾಸ್ಕ್‌ಗಳು ಹಾಗೂ ಸ್ಯಾನಿಟೈಜರ್‌ನ್ನು ನೀಡಲಾಗಿದೆ. ಢವಳೇಶ್ವರ, ಅರಳಿಮಟ್ಟಿ, ಬೀಸನಕೊಪ್ಪ, ಭೈರನಟ್ಟಿ, ಬಸಳಿಗುಂದಿ, ತಳಕಟ್ನಾಳ, ಖಂಡ್ರಟ್ಟಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪುನರ್ವಸತಿ ಕೇಂದ್ರಗಳ ಜವಾಬ್ದಾರಿಯನ್ನು ಟೀಂ ಎನ್‌ಎಸ್‌ಎಫ್ ನೋಡಿಕೊಳ್ಳುತ್ತಿದ್ದು, ನದಿ ತೀರದ ಎಲ್ಲ ಗ್ರಾಮಗಳಿಗೆ ಟೀಂ ಎನ್‌ಎಸ್‌ಎಫ್ ಭೇಟಿ ನೀಡಿ, ನಿರಾಶ್ರಿತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಈ ತಂಡದ ಜೊತೆಗೆ ಸಂಬಂಧಿಸಿದ ಅಧಿಕಾರಿಗಳು ಸಹ ಜೊತೆಗಿರುವರು ಎಂದು ಹೇಳಿದ್ದಾರೆ.

ಪುನರ್ವಸತಿ ಕೇಂದ್ರಗಳಲ್ಲಿ ಕೋವಿಡ್ ನಿಯಮ ಪಾಲಿಸಿ :

ದಿನೇ ದಿನೇ ಭಯಂಕರವಾಗಿ ಕಾಡುತ್ತಿರುವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ವಾಸವಿರುವ ನಿರಾಶ್ರಿತರು ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ ಸ್ಯಾನಿಟೈಜರ್ ಬಳಸಬೇಕೆಂದು ಅವರು ಕೋರಿದ್ದಾರೆ.
ಮಂಗಳವಾರ ಬೆಳಗಿನ ಮಾಹಿತಿಯಂತೆ ಘಟಪ್ರಭಾ ನದಿಗೆ ೮೨೨೯೫ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇದರಲ್ಲಿ ಹಿರಣ್ಯಕೇಶಿ ನದಿಯಿಂದ ೧೮೦೫೬ ಕ್ಯೂಸೆಕ್ಸ್, ಮಾರ್ಕಂಡೇಯ ನದಿಯಿಂದ ೧೦೯೨೫ ಕ್ಯೂಸೆಕ್ಸ್, ಬಳ್ಳಾರಿ ನಾಲೆಯಿಂದ ೧೫೧೦೦ ಕ್ಯೂಸೆಕ್ಸ್ ಮತ್ತು ಹಿಡಕಲ್ ಜಲಾಶಯದಿಂದ ೩೮೨೧೪ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಆದಾಗ್ಯೂ ಕಳೆದ ವರ್ಷದಲ್ಲಿ ಸಂಭವಿಸಿದ ಪ್ರವಾಹದಂತೆ ಈ ಬಾರಿ ಬರುವ ಯಾವುದೇ ಮುನ್ಸೂಚನೆ ಸದ್ಯಕ್ಕಿಲ್ಲ. ಮಹಾರಾಷ್ಟ್ರ ಮತ್ತು ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಕುಂಠಿತಗೊಂಡರೆ ನದಿ ತೀರದ ಗ್ರಾಮಗಳ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button