Latest

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಗಣ್ಯರು; ಸಿದ್ದರಾಮಯ್ಯ, ಪರಮೇಶ್ವರ ಜೊತೆ ಸಿಎಂ ಗುಸುಗುಸು

   

 

    ಪ್ರಗತಿವಾಹಿನಿ ಸುದ್ದಿ, ತುಮಕೂರು

ತುಮಕೂರಿನ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳಿಗೆ ಇನ್ನು 6-7 ತಿಂಗಳಲ್ಲಿ ಭಾರತರತ್ನ ಸಿಗಲಿದೆಯೇ?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆಡಿದ ಮಾತು ತೀವ್ರ ಕುತೂಹಲ ಮೂಡಿಸಿದೆ.  ಏನದು ಎಚ್ಡಿಕೆ ಮಾತು?

ಗುರುವಾರ ತುಮಕೂರಿನಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಗೃಹ ಮಂತ್ರಿ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ವೀರಪ್ಪ ಮೋಯ್ಲಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಸಿದ್ದಗಂಗಾ ಮಠದ ಹಾಲಿ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರು ಸಹ ಕಾರ್ಯಕ್ರಮದಲ್ಲಿದ್ದರು.

ಈ ವೇದಿಕೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕೆನ್ನುವುದು ನಮ್ಮೆಲ್ಲರ ಬಯಕೆಯಾಗಿತ್ತು. 2006ರಲ್ಲೇ ಅವರಿಗೆ ಭಾರತರತ್ನ ಕೊಡಿಸಲು ಪ್ರಯತ್ನ ಮಾಡಿದ್ದೆ. ಆದರೆ ಈವರಗೂ ಸಿಗಲಿಲ್ಲ. ನಾವು ನೀವು ಸೇರಿ ಅವರಿಗೆ ಭಾರತರತ್ನ ಕೊಡಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಇನ್ನು 6-7 ತಿಂಗಳಲ್ಲಿ  ಅವರಿಗೆ ಭಾರತರತ್ನ ಕೊಡುವಂತಹ ಅವಕಾಶ ನಮಗೇ ಭಗವಂತನ ದಯೆಯಿಂದ ಬರಲಿದೆ ಎನ್ನುವ ಆಶಯ ಹೊಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಇದನ್ನು ಬಹಳ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ ಎಂದೂ ಅವರು ಹೇಳಿದರು. 

ಸ್ವಾಮಿಗಳು ಜನಿಸಿರುವ ವೀರಾಪುರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದೂ ಅವರು ತಿಳಿಸಿದರು. 

ಸಿಎಂ ಭಾಷಣ ಆರಂಭಿಸುವಾಗ ಸಿದ್ದರಾಮಯ್ಯನವರನ್ನು ನಮ್ಮೆಲ್ಲರ ಮಾರ್ಗದರ್ಶಕರು ಎಂದು ಸಂಬೋಧಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಜೊತೆ ಪ್ರತ್ಯೇಕವಾಗಿ ಗುಪ್ತವಾಗಿ ಕುಮಾರಸ್ವಾಮಿ ಮಾತನಾಡುತ್ತಲೇ ಇದ್ದರು. ಪ್ರಸ್ತುತ ಸಮ್ಮಿಶ್ರ ರಾಜಕೀಯ ಗೊಂದಲದ ಹಿನ್ನೆಲೆಯಲ್ಲೆ ಸಿಎಂ ಮಾತು ಮತ್ತು ನಡೆ ಕುತೂಹಲಕಾರಿಯಾಗಿತ್ತು. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button