ಶಿಕ್ಷಣ ಸಚಿವ ಸುರೇಶ ಕುಮಾರ ವಿಶೇಷ ಗಮನ ನೀಡಬೇಕು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಾರ್ವಜನಿಕ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
60 ವರ್ಷಗಳಿಗೂ ಹಳೆಯದಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರೂ ಸೇರಿದಂತೆ ಎಲ್ಲ ವೃಂದಗಳ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ತಿದ್ದುಪಡಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ವಿನಂತಿಸಿದ್ದರು.
ತಿದ್ದುಪಡಿ ಮಾಡದೆ ಇರುವುದರಿಂದ ಅಧಿಕಾರಿಗಳು, ನೌಕರರು ಮತ್ತು ಶಿಕ್ಷಕರಿಗೆ ಮುಂಬಡ್ತಿ ಪಡೆಯುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಅವರು ತಿಳಿಸಿದ್ದರು. ಅವರ ಮನವಿಯ ಮೇಲೆಯೇ ಷರಾ ಬರೆದಿರುವ ಸಿಎಂ, ಕೂಡಲೆ ತಿದ್ದುಪಡಿ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಬಡ್ತಿಯಲ್ಲಿ ಅನ್ಯಾಯ
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿ.ದ.ಸಹಾಯಕ ಹುದ್ದೆಗೆ ನೇಮಕಗೊಂಡ ಸಿಬ್ಬಂದಿಗಳಿಗೆ ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಆರ್ಥಿಕ ನಷ್ಟ ಕುರಿತು ಗಮನ ಸೆಳೆಯಲಾಗಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಓರ್ವ ಸಿಬ್ಬಂದಿ ದ್ವಿ.ದ.ಸಹಾಯಕರ ಹುದ್ದೆಗೆ ನೇಮಕ ಹೊಂದಿದ್ದಲ್ಲಿ ಆತನಿಗೆ ಸುಮಾರು ೧೮ ರಿಂದ ೨೦ ವರ್ಷಗಳವರೆಗೆ ಒಂದೇ ಒಂದು ಬಡ್ತಿ ಸಿಗುವುದಿಲ್ಲ.
ಹಾಗೂ ಆತನಿಗೆ ೧೯-೨೦ ವರ್ಷದಲ್ಲಿ ಪ್ರ.ದ.ಸ ಹುದ್ದೆಗೆ ಬಡ್ತಿ ನೀಡಿದಾಗ ಆತನಿಗೆ ೨೦ ವರ್ಷದ ವಿಶೇಷ ವೇತನ ಬಡ್ತಿ ಸಿಗುವುದಿಲ್ಲ. ಇನ್ನೂ ಮುಂದೆ ಹೋಗಿ, ಸೇವೆಯ ೨ ಅಥವಾ ೩ ವರ್ಷ ಇರುವಾಗ ಅಧೀಕ್ಷಕರ ಹುದ್ದೆಗೆ ಬಡ್ತಿ ಕೆಲವರಿಗೆ ಬರುತ್ತದೆ. ಕೆಲವರಿಗೆ ಬರುವುದೇ ಇಲ್ಲ. ಇದರಿಂದ ದ್ವಿ.ದ. ಸಹಾಯಕರ ಹುದ್ದೆಗೆ ನೇಮಕ ಹೊಂದಿದ ಸಿಬ್ಬಂದಿ ೨೦ ವರ್ಷದ ವಿಶೇಷ ವೇತನ ಬಡ್ತಿ ಹಾಗೂ ೨೫-೩೦ ವರ್ಷದ ವೇತನ ಬಡ್ತಿಯಿಂದ ಸಹ ವಂಚಿತರಾಗುತ್ತಾನೆ. ಇದರಿಂದ ಸಾಕಷ್ಟು ಆರ್ಥಿಕ ನಷ್ಟ ಆಗುತ್ತದೆ.
ಆದ್ದರಿಂದ ದ್ವಿ.ದ.ಸ ಹುದ್ದೆಗೆ ನೇಮಕ ಹೊಂದಿದ ಹಾಗೂ ಮುಂದೆ ಬಡ್ತಿ ಪಡೆದು ಪ್ರ.ದ.ಸ ಹುದ್ದೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ೨೦, ೨೫ ಮತ್ತು ೩೦ ವರ್ಷದ ವಿಶೇಷ ವೇತನ ಬಡ್ತಿಯನ್ನು ನೀಡಲು ವಿನಂತಿಸಲಾಗಿತ್ತು.
ಅದು ಅಲ್ಲದೇ ಶಿಕ್ಷಣ ಇಲಾಖೆಯ ಸಿ & ಆರ್ (ಬೋಧಕೇತರ) ನಿಯಮಗಳಲ್ಲಿ ಬದಲಾವಣೆ ಮಾಡಿ ದ್ವಿ.ದ.ಸ ದಿಂದ ಪ್ರ.ದ.ಸ ಹುದ್ದೆಗೆ ಹಾಗೂ ಮುಂದೆ ಅಧೀಕ್ಷಕರ ಹುದ್ದೆಗೆ ಬಡ್ತಿ ನೀಡುವಾಗ ನೇರ ನೇಮಕಾತಿಯಿಂದ ಪ್ರ.ದ.ಸ ಹುದ್ದೆಗೆ ನೇಮಕಗೊಂಡಿರುವ ಸಿಬ್ಬಂದಿ ಹಾಗೂ ಬಡ್ತಿಯಿಂದ ಪ್ರ.ದ.ಸ ಹುದ್ದೆಗೆ ನೇಮಕಗೊಂಡಿರುವ ಸಿಬ್ಬಂದಿಗೆ ಶೇಕಡಾ ೫೦ ಅನುಪಾತದಂತೆ ಬಡ್ತಿ ನೀಡಿದಲ್ಲಿ ದ್ವಿ.ದ.ಸ ಹುದ್ದೆಯಲ್ಲಿ ನೇಮಕ ಹೊಂದಿದ ಸಿಬ್ಬಂದಿಗಳಿಗೆ ಸ್ವಲ್ಪ ಮಟ್ಟಿಗಾದರು ಅನಕೂಲವಾಗುವುದು.
ಒಬ್ಬ ಸಿಬ್ಬಂದಿ ದ್ವಿ.ದ.ಸ ದಿಂದ ಬಡ್ತಿ ಪಡೆದು ಬಹಳವಾದರೆ ಪ್ರ.ದ.ಸ ಅಥವಾ ಅಧೀಕ್ಷಕರ ಹುದ್ದೆಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ನೇರವಾಗಿ ಪ್ರ.ದ.ಸ ಹುದ್ದೆಗೆ ನೇಮಕ ಹೊಂದಿದ ಸಿಬ್ಬಂದಿ ಬಡ್ತಿ ಪಡೆದು ಎಸ್.ಎ.ಡಿ.ಪಿ.ಆಯ್ ಹುದ್ದೆಯವರೆಗೆ ಬಡ್ತಿ ಹೊಂದಿರುತ್ತಾನೆ. ಬೆಳಗಾವಿ ವಿಭಾಗದ ಯಾವುದೇ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಹುದ್ದೆಯಲ್ಲಿ ಒಬ್ಬರು ದ್ವಿ.ದ.ಸ ದಿಂದ ಬಡ್ತಿ ಹೊಂದಿದ ಸಿಬ್ಬಂದಿ ಇಲ್ಲ.
ಬೆಳಗಾವಿ ವಿಭಾಗದಲ್ಲಿ ಸುಮಾರು ೫೨ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಗಳು ಇವೆ. ಇದರಿಂದ ನೇರವಾಗಿ ದ್ವಿ.ದ.ಸ ಹುದ್ದೆಗೆ ನೇಮಕಾತಿ ಹೊಂದಿದ ಸಿಬ್ಬಂದಿಗಳಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ.
ಇದೀಗ ಮುಖ್ಯಮಂತ್ರಿ ಸೂಚನೆಯಂತೆ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ಸಮಗ್ರ ತಿದ್ದುಪಡಿ ಮಾಡಿದಲ್ಲಿ ಈ ಅನ್ಯಾಯಕ್ಕೆ ತೆರೆ ಬೀಳಬಹುದು.
ಶಿಕ್ಷಣ ಸಚಿವ ಸುರೇಶ ಕುಮಾರ ಈ ಕುರಿತು ವಿಶೇಷ ಗಮನ ನೀಡಬೇಕು ಎನ್ನುವುದು ನೊಂದ ನೌಕರರ ಅಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ