Karnataka News

ಶಿಕ್ಷಕರು ಸೇವಾ ಮನೋಭಾವನೆಯಿಂದ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯ ಮಾಡಬೇಕು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿಕ್ಷಕ ಕುಲಕ್ಕೆ ಘನತೆ ಗೌರವಗಳನ್ನು ತಂದುಕೊಟ್ಟ ಒಬ್ಬ ಶ್ರೇಷ್ಠ ಶಿಕ್ಷಕ ಡಾ. ಎಸ್.ರಾಧಾಕೃಷ್ಣನ್‌ರು. ಒಬ್ಬ ಶಿಕ್ಷಕ ಯಾವ ಎತ್ತರಕ್ಕೂ ಏರಬಲ್ಲ ಎಂಬುದನ್ನು ಅವರು ತೋರಿಸಿಕೊಟ್ಟವರು. ಇಂದಿನ ಶಿಕ್ಷಕರು ಸೇವಾ ಮನೋಭಾವನೆಯಿಂದ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.
ಅವರು ಬೆಳಗಾವಿಯ ನರ್ಸಿಂಗ್ ಕಾಲೇಜಿನ ವಿದೇಶದಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಆನ್‌ಲೈನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಸಾಮಾನ್ಯ ಶಿಕ್ಷಕನಾದವನು ಕೇವಲ ಓದುತ್ತಾನೆ, ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ, ಉತ್ತಮ ಶಿಕ್ಷಕನು ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸುತ್ತಾನೆ, ಅತ್ಯುತ್ತಮ ಶಿಕ್ಷಕನು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ, ಪ್ರೇರಣೆ ತುಂಬುತ್ತಾನೆ. ವಿದ್ಯಾರ್ಥಿಗಳಲ್ಲಿ ಅಧ್ಯಯನ ಮಾಡಬೇಕೆಂಬ ಹಂಬಲವನ್ನು ಉಂಟುಮಾಡುವವನೇ ನಿಜವಾದ ಶಿಕ್ಷಕ. ಶಿಕ್ಷಕನಾದವನು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳದೆ ಅವುಗಳನ್ನು ಅಂತರ್ಗತ ಮಾಡಿಕೊಳ್ಳಬೇಕು. ಮಾನವೀಯತೆ ಇಲ್ಲದ ಶಿಕ್ಷಣ ಬೋಧನೆ ಶುಷ್ಕವೆನಿಸುತ್ತದೆ. ಶಿಕ್ಷಕನಾದವನು ಕೇವಲ ಕೊಡುವವನಾಗಬಾರದು, ತೆಗೆದುಕೊಳ್ಳಲೂ ಕಲಿಯಬೇಕು ಅಂದರೆ ಶಿಕ್ಷಕ ನಿರಂತರ ಕಲಿಯುತ್ತಲೇ ಇರಬೇಕು. ವಿದ್ಯಾರ್ಥಿಗಳಿಂದಲೂ ಕಲಿಯಲು ತಯಾರಿರಬೇಕು.
ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ದೈವೀಕರಣಗೊಳಿಸುವದು ಸೂಕ್ತವಲ್ಲ. ಅವನನ್ನು ದೇವರನ್ನಾಗಿಸಿ, ಫೋಟೋ ಹಾಕಿ ಪೂಜೆ ಮಾಡಿದರೆ ಅದು ಸರಿಯಾದ ಆಚರಣೆ ಅಲ್ಲ. ಬದಲಾಗಿ ಅವರ ತತ್ವಗಳನ್ನು ಸ್ವಲ್ಪಮಟ್ಟಿಗಾದರೂ ಆಚರಣೆಯಲ್ಲಿ ತಂದರೆ ಅದೇ ನಿಜವಾದ ಆಚರಣೆ ಎಂದ ಡಾ.ಪ್ರಭಾಕರ ಕೋರೆಯವರು ಶಿಕ್ಷಕನು ಶಿಕ್ಷಕನ ಹಾಗೇ ಇರಬೇಕು, ರಾಜಕಾರಣ ಯಾಗಲು ಹೋಗಬಾರದು. ಒಮ್ಮೆ ಶಿಕ್ಷಕನಾದ ಮೇಲೆ ಆ ವೃತ್ತಿಯ ಘನತೆ ಗೌರವ ಕಾಪಾಡಬೇಕು. ಒಬ್ಬ ತಂದೆ ಕೆಟ್ಟರೆ ಒಂದು ಕುಟುಂಬ ಹಾಳಾಗುತ್ತದೆ, ಒಬ್ಬ ಇಂಜಿನಿಯರ್ ಕೆಟ್ಟರೆ ಒಂದು ಸೇತುವೆ ಹಾಳಾಗುತ್ತದೆ, ಒಬ್ಬ ಡಾಕ್ಟರ್ ಕೆಟ್ಟವನಿದ್ದರೆ ಒಂದು ಪೇಶಂಟ ಸಾಯುತ್ತದೆ ಆದರೆ ಒಬ್ಬ ಶಿಕ್ಷಕ ಶಿಕ್ಷಕನಾಗಿ ಉಳಿಯದೆ ಹೋದರೆ ಒಂದು ಜನಾಂಗವೇ ಹಾಳಾಗಿ ಹೋಗುತ್ತದೆ. ಶಿಕ್ಷಕರೇ ನಿಜವಾದ ರಾಷ್ಟ್ರನಿರ್ಮಾಪಕರು, ರಾಜಕಾರಣ ಗಳಲ್ಲ. ಶಿಕ್ಷಕವೃತ್ತಿ ಕೀಳಾದ ವೃತ್ತಿಯೆಂದು ಬಗೆಯದೆ ಅದನ್ನು ಪ್ರಿತಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಬೆಳಗಾವಿಯ ಕೆಎಲ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಮಾಜಿ ಪ್ರಾಂಶುಪಾಲರು, ಸುರೇಶ್ ಸಲೇರ್, ಪ್ರೊ. ಉಷಾ ಜೋಶಿ ಮತ್ತು ಡಾ. ರಾಮಚಂದ್ರ ಹೂಲಿ, ಹಾಗೂ ಯುಕೆ ಮೂಲದ ರಾಜೀವ್ ಮೆಟ್ರಿ, ಐಲೆಂಡ್‌ನ, ಈಶ್ವರ್ ಶೆಗುಣಶಿ ಮತ್ತು ನ್ಯೂಜಿಲೆಂಡ್‌ನ ಗಣಪತ್ ಪಾಟೀಲ್ ಆಯೋಜಿಸಿದ್ದರು.
ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಮಾಜಿ ನಿರ್ದೇಶಕ ಕರ್ನಲ್ ಎ.ಕೆ.ಸಿಂಗ್, ಪ್ರಾ.ಸುಧಾ ರೆಡ್ಡಿ, ೧೦೦ ಕ್ಕೂ ಹೆಚ್ಚು ಎನ್‌ಆರ್‌ಐ ಹಳೆಯ ವಿದ್ಯಾರ್ಥಿಗಳು ಮತ್ತು ಭಾರತೀಯ ಹಳೆಯ ವಿದ್ಯಾರ್ಥಿಗಳು ಯುಎಸ್, ಯುಕೆ, ಸ್ವಿಟ್ಜಲೆಂಡ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ದುಬೈ, ಇಥಿಯೋಪಿಯಾ ನ್ಯೂಜಿಲೆಂಡ್ ಮತ್ತು ಭಾರತದ ವಿವಿಧ ರಾಜ್ಯಗಳಿಂದ ೨೦೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಆನ್‌ಲೈನ್‌ದಲ್ಲಿ ಆಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button