ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಪೌರ ಕಾರ್ಮಿಕರನ್ನು ಕರೆಸಿ ಅವರನ್ನು ಸನ್ಮಾನ ಮಾಡಿ ಪ್ಲಾಸ್ಟಿಕ್ ಮುಕ್ತ ಭಾರತದ ಅಭಿಯಾನ ಹಮ್ಮಿಕೊಂಡಿದ್ದು ಸಂತಸದ ಸಂಗತಿ ಎಂದು ಬಾಗಲಕೋಟ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.
ಶನಿವಾರ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀ ಮಠದಿಂದ ಅಭಿನಂದನಾ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ದೇಶಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡುವಂತೆ ಶ್ರೀಗಳು ಸಂಕಲ್ಪ ತೊಟ್ಟು ದೊಡ್ಡ ಪ್ರಮಾಣದಲ್ಲಿ ಪೌರ ಕಾರ್ಮಿಕರ ಸಮ್ಮುಖದಲ್ಲಿ ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ನೀಡಿ ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಶ್ರಮಿಸುತ್ತಿರುವುದು ಶ್ಲಾಘನೀಯ. ಭಕ್ತರ ನೋವುಗಳನ್ನು ಹತ್ತಿರದಿಂದ ಅರಿತು ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿರುವ ಸ್ವಾಮೀಜಿ ಇವರಾಗಿದ್ದಾರೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಶಶಿಧರ ಕುರೇರ ಮಾತನಾಡಿ, ಒಬ್ಬ ಅಧಿಕಾರಿ ಒಳ್ಳೆಯ ಕೆಲಸ ಮಾಡಲು ಸಹಸಿಬ್ಬಂದಿ, ಮಠಾಧೀಶರು, ರಾಜಕಾರಣಿಗಳ ಸಹಕಾರ ಅತ್ಯಗತ್ಯ. ಎಲ್ಲರ ಮಾರ್ಗದರ್ಶನದಲ್ಲಿ ರಾಮಚಂದ್ರನ್ ಅವರು ಜಿಪಂ ಸಿಇಒ ಆಗಿ ಅಭಿವೃದ್ಧಿ ಮಾಡಿ ಯಶಸ್ವಿಯಾಗಿದ್ದಾರೆ ಎಂದರು.
ಹುಕ್ಕೇರಿ ಹಿರೇಮಠ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಂಡಿದ್ದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಕುರೇರ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿಇಒ ಆಗಿ ಸೇವೆ ಸಲ್ಲಿಸಿ ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಿ ಬಾಗಲಕೋಟ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿರುವುದು ಹೆಮ್ಮೆಯ ಸಂಗತಿ. ಮುಂಬರುವ ದಿನಗಳಲ್ಲಿ ರಾಮಚಂದ್ರನ್ ಅವರಿಗೆ ಉನ್ನತ ಸ್ಥಾನ ದೊರೆಯುವಂತಾಗಲಿ ಎಂದು ಹಾರೈಸಿದರು.
ಲೀಲಾವತಿ ಹಿರೇಮಠ, ರೇವತಿ ಮಠದ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ