ಪ್ರಗತಿವಾಹಿನಿ ಸುದ್ದಿ, ಚನ್ನಪಟ್ಟಣ
ಹೊಸದಾಗಿ ವಕೀಲ ವೃತ್ತಿಗೆ ಬರುವ ಯುವಕರಿಗೆ ನೀಡುತ್ತಿರುವ 2 ಸಾವಿರ ರುಪಾಯಿ ಸ್ಟೈ ಫಂಡ್ನನ್ನು 5 ಸಾವಿರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಚನ್ನಪಟ್ಟಣದಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಇಂದು ಉದ್ಘಾಟಿಸಿ ಮಾತನಾಡಿದರು.
ವಕೀಲ ವೃತ್ತಿಗೆ ಹೊಸದಾಗಿ ಬರುವವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಟೇ ಫಂಡ್ನನ್ನು ಹೆಚ್ಚಿಸುವ ಪ್ರಸ್ತಾವನೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಿದ್ದರೆ ನ್ಯಾಯಾಂಗ ಬಲಿಷ್ಠವಾಗಿರಬೇಕು. ಇದರಿಂದಲೇ ನಮ್ಮಪ್ರಜಾಪ್ರಭುತ್ವ ಇನ್ನು ಉಳಿದಿದೆ. ಭಾರತದ ಪ್ರಜಾಪ್ರಭುತ್ವ ಎಲ್ಲರಿಗೂ ಸಮಾನತೆ ನೀಡಿದೆ. ಆದರೆ, ಈ ಶತಮಾನದಲ್ಲೂ ಜಾತಿ ಮನೋಭಾವ ತೊಲಗಿಲ್ಲ. ಪ್ರತಿಯೊಬ್ಬ ನಾಗರಿಕನಿಗು ಸಮಾನ ನ್ಯಾಯ ಸಿಗಬೇಕಿದ್ದರೆ ಜಾತಿ ನಡುವಿನ ಸಂಕೋಲೆಯನ್ನು ಮೊದಲು ಕಳಚಬೇಕು ಎಂದರು.
ನಮ್ಮ ರಾಜ್ಯದಲ್ಲಿ 1307 ನ್ಯಾಯಾಲಯಗಳಿದ್ದು, ಕೆಲವು ನ್ಯಾಯಾಲಗಳಿಗೆ ಸ್ವಂತ ಕಟ್ಟಡವಿಲ್ಲ. ನಮ್ಮ ಸರಕಾರ ಈ ಎಲ್ಲದಕ್ಕು ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ನ್ಯಾಯಾಂಗ ವ್ಯವಸ್ಥೆ ದೇಶಕ್ಕೆ ಮಾದರಿ
ರಾಜ್ಯದ ನ್ಯಾಯಾಂಗ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜವನ್ನು ಸರಿದಾರಿಗೆ ತೆಗೆದು ಕೊಂಡು ಹೋಗುವಲ್ಲಿ ನ್ಯಾಯಾಲಯಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಆಧಾರಸ್ಥಂಬಗಳು, ಈ ಎಲ್ಲಾ ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಪೂರಕ ವಾತಾವರಣ ಅಗತ್ಯ. ನ್ಯಾಯಾಂಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಪ್ರಧಾನ್ಯತೆ ಇದ್ದು ಇಂತಹ ಕಟ್ಟಡಗಳ ಅವಕಾಶ ಇದೆ ಎಂದು ಅಭಿಪ್ರಾಯಪಟ್ಟರು.
ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಕಾರಣ, ಸರ್ಕಾರದ ಇತರ ಅಂಗಗಳು ತಪ್ಪು ಮಾಡಿದಾಗ ಸಂವಿಧಾನಕ್ಕೆ ಅಪಚಾರವಾಗದಂತೆ ಎಚ್ಚರಿಸುವ ಕೆಲಸ ನ್ಯಾಯಾಂಗದ್ದು, ನಾವೆಲ್ಲ ನ್ಯಾಯಾಲಗಳನ್ನು ದೇವಾಲಯಗಳಂತೆ ಗೌರವಿಸ ಬೇಕಿದೆ ಎಂದರು.
ಗ್ರಾಮೀಣ ವಕೀಲರ ಕೊಡುಗೆ ಅಪಾರ:
ಬೆಂಗಳೂರಿನಂತೆಹ ಮಹಾನಗರದಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಹಣ ದೊರೆಯುತ್ತದೆ. ಇದನ್ನು ಬಿಟ್ಟು ಹಳ್ಳಿಗಾಡಿನ ಬಡ ಜನತೆಗೆ ನ್ಯಾಯ ಕೊಡಲು ಶ್ರಮಿಸುತ್ತಿರುವ ಗ್ರಾಮೀಣ ವಕೀಲರ ಸೇವೆ ಪ್ರಮುಖವಾದದ್ದು, ಇಂತಹ ವಕೀಲರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಗ್ರಂಥಾಲಯಕ್ಕೆ ೧೦ ಲಕ್ಷ ರೂ.: ನೂತನ ನ್ಯಾಯಾಲಯ ಕಟ್ಟಡದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿ ಮತ್ತು ಡಿಜಿಟಲೀಕರಣಕ್ಕೆ ಸಂಸದರ ನಿಧಿಯಿಂದ ೧೦ ಲಕ್ಷ ಕೊಡಿಸುವುದಾಗಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು. ಇದಕ್ಕೆ ಸಭೆಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಸಹ ಸಮ್ಮತಿ ಸೂಚಿಸಿದರು.
ಕನಕಪುರದಲ್ಲೂ ಸುಸಜ್ಜಿತ ನ್ಯಾಯಾಲಯ:
ಕನಕಪುರ ತಾಲೂಕು ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕಾಮಗಾರಿಗೆ ೩೪ ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಮುಖ್ಯನ್ಯಾಯ ಮೂರ್ತಿಗಳು ಕೂಡಲೇ ದಿನಾಂಕ ನಿಗದಿ ಮಾಡಿ ಶಂಕುಸ್ಥಾಪನೆ ನೆರೆವೇರಿಸ ಬೇಕೆಂದು ಮನವಿ ಮಾಡಿದರು.
ನ್ಯಾ.ರಮೇಶ್ ಬಗ್ಗೆ ಮೆಚ್ಚುಗೆ: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಹುಲುವಾಡಿ.ಜಿ.ರಮೇಶ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ತಾಲೂಕಿನ ಕೆರೆಗಳನ್ನು ತುಂಬಿಸಲು ಇವರ ಕೊಡುಗೆ ಅಪಾರವಾದದ್ದು, ನಾವು ಬೋರ್ಡು ಹಾಕಿಕೊಳ್ಳುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಮೂರ್ತಿ ಎಲ್.ನಾರಾಯಣಸ್ವಾಮಿ, ಹೈಕೋರ್ಟ್ ನ್ಯಾಮೂರ್ತಿ ಹಾಗೂ ರಾಮನಗರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಮಧ್ಯಪ್ರದೇಶ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹುಲುವಾಡಿ.ಜಿ.ರಮೇಶ್, ಹೈಕೋರ್ಟ್ ಮಹಾವಿಲೇಖನಾಧಿಕಾರಿ ಶ್ರೀಶಾನಂದ, ಸಂಸದ ಡಿ.ಕೆ.ಸುರೇಶ್, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ನ್ಯಾಯಾಧೀಶರಾದ ಎಂ.ಜಿ.ಉಮಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
(ಪ್ರಗತಿವಾಹಿನಿಯ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ