Kannada NewsKarnataka NewsLatest

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮುಹೂರ್ತ ಫಿಕ್ಸ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸಿರುವ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ನೆನಪು ಮಾಸುವ ಮುನ್ನವೇ ಕರ್ನಾಟಕ ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸುವಷ್ಟು ಪ್ರಬಲವಾಗಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ.

ನವೆಂಬರ್ 6ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ನಡೆಯಲಿದೆ.

ಆಗಸ್ಟ್ ತಿಂಗಳಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು

ಮಾಜಿ ಸಂಸದ ರಮೇಶ ಕತ್ತಿ ಹಾಲಿ ಅಧ್ಯಕ್ಷರು. ಅವರು ಮತ್ತೊಮ್ಮೆ ಬ್ಯಾಂಕ್ ಮೇಲೆ ಹಿಡಿತ ಸಾಧಿಸಿ ಅಧ್ಯಕ್ಷರಾಗಲು ಪ್ರಯತ್ನ ನಡೆಸಿದ್ದಾರೆ. ಅವರಿಗೆ ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲವಾಗಿ ನಿಂತಿದ್ದಾರೆ. 

laxman savadi First reaction about Getting The minister seat

ಮತ್ತೊಂದೆಡೆ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಮಹಾಂತೇಶ ದೊಡ್ಡಗೌಡರ್, ಮಾಜಿ ಶಾಸಕ ಅರವಿಂದ ಪಾಟೀಲ ಮೊದಲಾದವರು ತಮ್ಮ ಗುಂಪಿಗೆ ಪ್ರಾಬಲ್ಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 

ಹಾಗಾಗಿ ಬಿಜೆಪಿ ನಾಯಕರಲ್ಲೇ ಎರಡು ಗುಂಪುಗಳಾಗಿದ್ದು, ಭಾರೀ ಪೈಪೋಟಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ಸಾಕ್ಷಿಯಾಗಲಿದೆ. ಈ ಚುನಾವಣೆ ರಾಜ್ಯ ಸರಕಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈಗಾಗಲೆ ಆರ್ ಎಸ್ಎಸ್ ಮುಖಂಡರು ಎರಡೂ ಗುಂಪುಗಳನ್ನು ಕರೆದು ಒಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅಂತಹ ಸಾಧ್ಯತೆ ತೀರಾ ಕಡಿಮೆ.

ಈ ಮಧ್ಯೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಕೂಡ ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆ ಆಖಾಡಕ್ಕೆ ಧುಮುಕಲಿದ್ದಾರೆ. ಬೆಳಗಾವಿ ತಾಲೂಕಿನ ಬಹುತೇಕ ಸಹಕಾರಿ ಸಂಘಗಳು ಅವರ ಬೆಂಬಲಕ್ಕೆ ನಿಂತಿವೆ.

ಈಗಾಗಲೆ ಜಿಲ್ಲೆಯಲ್ಲಿ ಚುನಾವಣೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಪ್ರಚಾರ ಕಾರ್ಯವೂ ಭರದಿಂದಲೇ ಶುರುವಾಗಿದೆ.

ಒಟ್ಟಾರೆ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ರಾಜ್ಯ ರಾಜಕೀಯವನ್ನೇ ಒಮ್ಮೆ ಅಲ್ಲಾಡಿಸಿದರೂ ಆಶ್ಚರ್ಯವಿಲ್ಲ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button