Latest

ಏಕಾಂಗಿ ಯೋಧರೆಲ್ಲ ನಾಯಕರಾಗಲು ಸಾಧ್ಯವಿಲ್ಲ, ನನ್ನ ಮುಂದೆ ಸುತ್ತಾಡುವವರನ್ನು ನಾಯಕರೆಂದು ಒಪ್ಪುವುದಿಲ್ಲ: ಡಿ.ಕೆ ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: – ಮಹಿಳಾ ನಾಯಕಿಯರು ಪುರುಷ ನಾಯಕರ ಜತೆ ಮುಖ್ಯಭೂಮಿಕೆಯಲ್ಲಿ ಸರಿಸಮನಾಗಿ ಹೋರಾಟ ಮಾಡಬೇಕು. ನೀವು ಬರೀ ಮಹಿಳೆಯರ ಜತೆ ಸ್ಪರ್ಧೆ ಮಾಡುವ ಮನೋಭಾವವನ್ನು ಬಿಟ್ಟುಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಕ್ಷದ ಮಹಿಳಾ ನಾಯಕಿಯರಿಗೆ ಕರೆ ನೀಡಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ತೃತೀಯ ಲಿಂಗಿಗಳು ಹಾಗೂ ಮಾನವ ಹಕ್ಕು ಹೋರಾಟಗಾರ್ತಿ ಡಾ.ಅಕೈ ಪದ್ಮಶಾಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಡಿ.ಕೆ ಶಿವಕುಮಾರ್ ಅವರು ಮಹಿಳಾ ಕಾಂಗ್ರೆಸ್ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಅಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವೆ ಉಮಾಶ್ರೀ, ಜಯಮಾಲ,  ಅಂಜಲಿ ನಿಂಬಾಳ್ಕರ್, ಸೌಮ್ಯ ರೆಡ್ಡಿ ಹಾಗು ಇತರ ಪ್ರಮುಖ ನಾಯಕಿಯರು ಇದ್ದರು.
ಮಹಿಳಾ ಕಾಂಗ್ರೆಸ್ ಸಭೆಯನ್ನು ನಾಲ್ಕೈದು ತಿಂಗಳ ಹಿಂದೆಯೇ ಮಾಡಬೇಕೆಂದುಕೊಂಡಿದ್ದೆ. ಆದರೆ ಕೊರೋನಾದಿಂದಾಗಿ ಸಾಧ್ಯವಾಗಿರಲಿಲ್ಲ. ಇಂದು ಅಕೈ ಪದ್ಮಶಾಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಸುಸಂದರ್ಭದಲ್ಲಿ ಸಭೆ ಮಾಡುತ್ತಿದ್ದೇನೆ. ಮಹಿಳಾ ನಾಯಕಿಯರು ಸಮಾಜದ ಮುಖ್ಯಭೂಮಿಕೆಯಲ್ಲಿ ಪುರುಷರ ಜತೆಗೂಡಿ ಹೋರಾಟ ಮಾಡಬೇಕು. ನಿಮ್ಮಲ್ಲಿರುವ ಗೊಂದಲದ ಆಲೋಚನೆಯನ್ನು ಬಿಟ್ಟು ಹೋರಾಟ ಮಾಡಲು ಮುಂದಾಗಬೇಕು’ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು, ಪಕ್ಷಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೇಗೆ ಸೇರ್ಪಡೆ ಮಾಡಿಸಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ಯಾವ ರೀತಿ ಹೊಸ ದಿಕ್ಕು ಕಲ್ಪಿಸಬೇಕು ಎಂಬುದರ ಜತೆಗೆ ಮಹಿಳೆಯರ ಸಮಸ್ಯೆ ಬಗೆಹರಿಸುವ ಬಗ್ಗೆ ನಿಮ್ಮ ಸಲಹೆ ಪಡೆಯಲು ಇಂದು ಸಭೆ ಕರೆದಿದ್ದೇನೆ ಎಂದೂ ಹೇಳಿದರು.
‘ಅಕೈ ಪದ್ಮಶಾಲಿ ಅವರು ಪಕ್ಷದ ಸಿದ್ಧಾಂತ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಪಕ್ಷ ನೀಡಿರುವ ಕೊಡುಗೆಯ ಪ್ರೇರಣೆಯಿಂದ ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ಅಕೈ ಪದ್ಮಶಾಲಿ ಅವರು ಕೇವಲ ರಾಜ್ಯ ಕಾಂಗ್ರೆಸ್ ನ ಆಸ್ತಿಯಲ್ಲ. ಅವರು ಪಕ್ಷಕ್ಕೆ ರಾಷ್ಟ್ರೀಯ ಮಟ್ಟದ ಆಸ್ತಿಯಾಗಲಿದ್ದಾರೆ. ಇಂತಹ ದೊಡ್ಡ ಹೋರಾಟದ ಧ್ವನಿ ಪಕ್ಷಕ್ಕೆ ಬಂದಿರುವುದು ಸಂತೋಷದ ಸಂಗತಿ. ಇವರನ್ನು ಮುಖ್ಯವೇದಿಕೆಯಲ್ಲಿ ಬಳಸಿಕೊಳ್ಳಬೇಕು. ಅವರು ಕೇವಲ ಒಬ್ಬರು ಬಂದಿಲ್ಲ. ಅವರ ಸಮುದಾಯದ ಶಕ್ತಿಯನ್ನು ತಂದಿದ್ದಾರೆ ಎಂದರು.
‘ಯಾರು ತಳಮಟ್ಟದಲ್ಲಿ ಜನರ ಮಧ್ಯೆ ಇದ್ದು, ಅವರ ಕಷ್ಟಕ್ಕೆ ಸ್ಪಂಧಿಸಿ ಧ್ವನಿಯಾಗುತ್ತಾರೋ ಅವರನ್ನು ಮಾತ್ರ ನಾನು ನಾಯಕರು ಎಂದು ಪರಿಗಣಿಸುತ್ತೇನೆ. ಏಕಾಂಗಿ ಯೋಧರೆಲ್ಲ ನಾಯಕರಾಗಲು ಸಾಧ್ಯವಿಲ್ಲ. ನನ್ನ ಮುಂದೆ ಸುತ್ತಾಡುವವರನ್ನು ನಾಯಕರೆಂದು ಒಪ್ಪುವುದಿಲ್ಲ. ಶಿಫಾರಸ್ಸಿನ ಮೇಲೆ ಹುದ್ದೆ ಪಡೆದವರು ಆ ಹುದ್ದೆಯಲ್ಲಿ ಇರುವವರೆಗೆ ಮಾತ್ರ ನಾಯಕರಾಗಿರುತ್ತಾರೆ. ಇದು ನನ್ನ 40 ವರ್ಷದ ರಾಜಕಾರಣದ ಅನುಭವದಲ್ಲಿನ ಮಾತು ಎಂದು ಶಿವಕುಮಾರ ಹೇಳಿದರು.
‘ಕಾಂಗ್ರೆಸ್ ಪಕ್ಷ ತೃತೀಯ ಲಿಂಗದವರಿಗೆ ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ. ಅವರ ವಿಚಾರಧಾರೆಯನ್ನು ಒಪ್ಪಿ ನಾವು ಅವರಿಗೆ ಕಾರ್ಯಕ್ರಮ ನೀಡಿದ್ದೆವು. ಮುಂದಿನ ದಿನಗಳಲ್ಲೂ ಆ ನೊಂದ ಜನರಿಗೆ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಲು ಕೆಲಸ ಮಾಡುತ್ತೇವೆ. ನಾವು ಅವರ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಅವರಿಗೆ ಸಮಾನತೆ ನೀಡುವುದು ನಮ್ಮ ಧರ್ಮ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ವ್ಯಾಪಕ ಚರ್ಚೆ ಮಾಡಿ ಅವರ ಜತೆ ಪಕ್ಷ ನಿಲ್ಲಬೇಕು ಎಂದು ನಿರ್ಧರಿಸಿದ್ದಾರೆ. ಅಕೈ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆ ಸಮುದಾಯದ ಒಳಿತಿಗಾಗಿ ಪಕ್ಷ ಶ್ರಮಿಸಲಿದೆ ಎಂದು ಹೇಳಿದರು.’

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button