ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆಯೂ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಹಲವು ನಿಯಮಗಳನ್ನು ಬದಲಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 243 ವಿಧಾನಸಭಾ ಕ್ಷೇತ್ರಗಳ ಬಿಹಾರ ವಿಧಾನಸಭೆ ಅವಧಿ ನ.29ರಂದು ಅಂತ್ಯವಾಗಲಿದ್ದು, ಅ.28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ಕ್ಕೆ ಮೊದಲ ಹಂತ, ನವೆಂಬರ್ 3ಕ್ಕೆ ಎರಡನೇ ಹಂತ ಹಾಗೂ ನವೆಂಬರ್ 7ಕ್ಕೆ ಮೂರನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 10ಕ್ಕೆ ಮತ ಎಣಿಕೆನಡೆಯಲ್ಲಿದ್ದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
ಕೊರೊನಾ ಕಾರಣದಿಂದಾಗಿ ಹಲವು ನಿಯಮಗಳನ್ನು ಬದಲಿಸಲಾಗಿದ್ದು, ನಾಮಪತ್ರಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಚುನಾವಣಾ ರ್ಯಾಲಿಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ, ಮನೆ ಪ್ರಚಾರಕ್ಕೆ ಐದಕ್ಕಿಂತ ಹೆಚ್ಚು ಮಂದಿ ಹೋಗುವಂತಿಲ್ಲ. ಮತದಾನದ ಅವಧಿಯನ್ನು 1 ಗಂಟೆ ವಿಸ್ತರಿಸಲಾಗಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ. ಸುರಕ್ಷಿತವಾಗಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ 7 ಲಕ್ಷ ಯುನಿಟ್ ಸ್ಯಾಟಿಟೈಸರ್, 46 ಲಕ್ಷ ಮಾಸ್ಕ್, ಗ್ಲೌಸ್, 6 ಲಕ್ಷ ಪಿಪಿಇ ಕಿಟ್, ಫೇಸ್ ಶೀಲ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ