Latest

ಬ್ರಿಟೀಷ್ ಆಡಳಿತ ನೆನಪಾಗುತ್ತಿದೆ ಎಂದ ನಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ’ಆ ದಿನಗಳು’ ಖ್ಯಾತಿಯ ನಟ ಚೇತನ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆ ನೋಡುತ್ತಿದ್ದರೆ ಬ್ರಿಟೀಷ್ ಆಡಳಿತದ ನೆನಪಾಗುತ್ತುದೆ. ಅನ್ನದಾತನನ್ನು ಗುಲಾಮನನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನಟ ಚೇತನ್, ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗಳ ಕೈ ವಶವಾಗುತ್ತಿದೆ. ಇದರಿಂದ ಸಮಾಜಕ್ಕೆ ಅನ್ನ ನೀಡುವ ಅನ್ನದಾತ ಭೂಮಿ ಕಳೆದುಕೊಳ್ಳಲಿದ್ದಾನೆ. ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧವಿದೆ ಎಂದರು.

ಸರ್ಕಾರಗಳು ಕಾರ್ಪೊರೇಟ್ ಕುಳಗಳಿಗೆ ಸಹಾಯ ಮಾಡುವ ಮೂಲಕ ಎಲ್ಲವನ್ನೂ ಪ್ರೈವೆಟೈಸೇಷನ್ ಮಾಡಲು ಹೊರಟಿವೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿ ತರುವ ಮೂಲಕ ಸರ್ಕಾರಗಳು ರೈತರ ಪರ ಅಲ್ಲ ಎಂಬುದನ್ನು ಸಾಬೀತು ಪಡಿಸುತ್ತಿವೆ. ಕೃಷಿ ಭೂಮಿಯನ್ನು ಯಾರು ಬೇಕಾದರೂ ಕೊಂಡುಕೊಳ್ಳುವುದರಿಂದ ರೈತ ಕೃಷಿ ಭೂಮಿ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿಯುವಂತಾಗುತ್ತದೆ. ರೈತರ ಮೇಲೆ ನಡೆಯುತ್ತಿರುವ ಸರ್ಕಾರದ ಈ ದಬ್ಬಾಳಿಕೆ ನೋಡಿದರೆ ಬ್ರಿಟೀಷ್ ಆಡಳಿತ ನೆನಪಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button