ಹಾಲಶುಗರ ಕಾರ್ಖಾನೆಯ 34ನೇ ಬಾಯ್ಲರ್ ಪ್ರದೀಪನೆಗೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಕಳೆದ ಎರಡು ಹಂಗಾಮುಗಳು ಕಷ್ಟಕರವಾಗಿದ್ದವು. ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಒಳ್ಳೆಯ ದಿನಗಳಿದ್ದು ಎಲ್ಲರೂ ನಿತ್ಯ ೪೦೦೦ ಮೆ.ಟನ್ ಕಬ್ಬು ನುರಿಸಲು ಪ್ರಯತ್ನಿಸಬೇಕು’ ಎಂದು ಚಿಕ್ಕೋಡಿ ಸಂಸದ ಹಾಗೂ ಹಾಲಶುಗರ ಕಾರ್ಖಾನೆಯ ಮಾರ್ಗದರ್ಶಕ ಅಣ್ಣಾಸಾಹೇಬ ಜೊಲ್ಲೆ ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಕಾರ್ಖಾನೆಯ ೩೪ನೇ ಬಾಯ್ಲರ್ ಪ್ರದಿಪನ ಸಮಾರಂಭದಲ್ಲಿ ಅವರು ಮಾತನಾಡಿದರು. ’ಮೊದಲಿನ ಕಾರ್ಖಾನೆಯ ಆಡಳಿತ ಹಾಗೂ ಕಳೆದ ಎರಡು ವರ್ಷಗಳಲ್ಲಿನ ಕಾರ್ಖಾನೆಯ ಆಡಳಿತದ ಕುರಿತು ಎಲ್ಲರಿಗೂ ಗೊತ್ತಿದೆ. ಸಂಕಷ್ಟದಲ್ಲಿಯೂ ಕಾರ್ಖಾನೆಯಲ್ಲಿ ಎರಡು ಗೋದಾಮು ಹಾಗೂ ಒಂದು ಮೊಲ್ಯಾಸಿಸ್ ಟ್ಯಾಂಕ್ ನಿರ್ಮಿಸಲಾಗಿದೆ. ಸಾಲ ಕಡಿಮೆ ಮಾಡುತ್ತ ಕಾರ್ಖಾನೆಯ ಬೆಳವಣಿಗೆಯತ್ತ ಗಮನ ಹರಿಸಲಾಗಿದೆ. ಬೀರೇಶ್ವರ ಸಂಸ್ಥೆಯಿಂದ ಸುಮಾರು ರೂ.೧೦೦ ಕೋಟಿ ಸಾಲ ನೀಡಲಾಗಿದೆ’ ಎಂದರು.
’ಕಾರ್ಖಾನೆಯ ಸಿಬ್ಬಂದಿ ಹಾಗೂ ಕಾರ್ಮಿಕರತ್ತ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇತಿಹಾಸದಲ್ಲಿ ಎಂದೂ ಮುಗಿಯದ ಸಿಬ್ಬಂದಿ-ಕಾರ್ಮಿಕರ ವಿಷಯವನ್ನು ನಮ್ಮ ಆಡಳಿತದಲ್ಲಿ ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಪದೋನ್ನತಿ ಹಾಗೂ ಬೋನಸ್ ವಿಷಯಗಳೂ ಸಹ ನೆರವೇರಿಸಲಾಗುವುದು. ಆರೋಗ್ಯ ವಿಮೆ ಕುರಿತು ಚರ್ಚಿಸಲಾಗುತ್ತಿದೆ. ರೈತರ ಕಬ್ಬಿನ ಬಿಲ್ಲು, ಕಾರ್ಮಿಕರ ವೇತನ ನಿಗದಿತ ಸಮಯದಲ್ಲಿ ಸಂದಾಯ ಮಾಡಲಾಗುತ್ತಿದೆ. ಬಹುತೇಕ ಕಾರ್ಖಾನೆಯ ಮೇಲೆಯೇ ಬಹಳಷ್ಟು ಕಾರ್ಮಿಕರು ಅವಲಂಬಿತರಾಗಿದ್ದಾರೆ. ಕಾರ್ಖಾನೆಯು ಉಳಿದು ಬೆಳೆದರೆ ನೀವೂ ಸಹ ಬೆಳೆಯುವಿರಿ. ಕಾರ್ಖಾನೆಯ ಏಳಿಗೆಗೆ ಎಲ್ಲರೂ ಸೇರಿ ಶ್ರಮಿಸೋಣ’ ಎಂದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿ ’ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆಯವರು ಕಾರ್ಖಾನೆಗೆ ಆರ್ಥಿಕವಾಗಿ ಬಹಳಷ್ಟು ಸಹಕರಿಸಿದ್ದಾರೆ. ಅವರ ಮಾರ್ಗದರ್ಶನವೂ ಸದಾ ಇರುತ್ತದೆ. ಅವರ ಸಹಕಾರ, ಮಾರ್ಗದರ್ಶನ ಹೀಗೆಯೇ ಕಾರ್ಖಾನೆಗೆ ಸಿಗುತ್ತಿರಲಿ. ಪ್ರಸಕ್ತ ಹಂಗಾಮಿನಲ್ಲಿ ಸುಮಾರು ೫.೫೦ ಲಕ್ಷದಿಂದ ೬ ಲಕ್ಷ ಮೆ.ಟನ್ ಕಬ್ಬು ನುರಿಸುವ ನಿಟ್ಟಿನಲ್ಲಿ ಕಾರ್ಮಿಕರು ಸ್ವಂತ ಕಾರ್ಖಾನೆ ಎಂದು ತಿಳಿದು ಒಗ್ಗಟ್ಟಿನಿಂದ ಪರಿಶ್ರಮಿಸಬೇಕು.’ ಎಂದರು.
ಬಾಯ್ಲರ್ ಪ್ರದಿಪನಕ್ಕೆ ಚಾಲನೆ ನೀಡಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನಿಡಸೋಸಿಯ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ’ಒಂದು ಕಾರ್ಖಾನೆ ಚೆನ್ನಾಗಿ ಬೆಳೆದರೆ ರೈತರ, ಕಾರ್ಮಿಕರ ಉದ್ಧಾರವಾಗುತ್ತದೆ, ದೇಶದ ಅಭಿವೃದ್ಧಿಯಾಗುತ್ತದೆ’ ಎಂದರು.
ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ ’ಡಿಸ್ಟಿಲ್ಲರಿ ಘಟಕದ ಸ್ಥಾಪನೆಯ ಕಾರ್ಯ ಕೊನೆಯ ಹಂತದಲ್ಲಿದೆ’ ಎಂದರು.
ಆರಂಭದಲ್ಲಿ ಸಂಚಾಲಕ ಮಲ್ಲಾಪ್ಪಾ ಪಿಸೂತ್ರೆ ದಂಪತಿಯಿಂದ ವಿಧಿವತ್ತಾಗಿ ಪೂಜೆ ನಡೆಯಿತು. ಸಂಚಾಲಕ ಪಪ್ಪು ಪಾಟೀಲ ಸ್ವಾಗತಿಸಿದರು. ಎಂಜಿನೀಯರ್ ನವೀನ ಬಾಡಕರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಯಿಸ್-ಚೇರಮನ್ ಮಲಗೊಂಡಾ ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ಸುಕುಮಾರ ಪಾಟೀಲ, ಅವಿನಾಶ ಪಾಟೀಲ, ಸಮಿತ ಸಾಸನೆ, ರಾಜಾರಾಮ ಖೋತ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ