ಶಾಸಕರಾರೂ ಶಾಲೆಗಳನ್ನು ಆರಂಭಿಸುವ ಬಗ್ಗೆ ಒಲವು ತೋರಿಲ್ಲ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಧ್ಯಕ್ಕೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಯೋಚನೆಯೂ ಸರ್ಕಾರದ ಮುಂದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಗಳ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಧ್ಯಕ್ಕೆ ಶಾಲೆಗಳನ್ನು ಆರಂಭಿಸುವ ಧಾವಂತದಲ್ಲಿ ಸರ್ಕಾರ ಇಲ್ಲ. ಈ ಬಗ್ಗೆ ಪೋಷಕರಿಗಾಗಲೀ, ಮಕ್ಕಳಿಗಾಗಲಿ ಯಾವುದೇ ಗೊಂದಲಗಳೂ ಬೇಡ ಎಂದರು.
ಶಾಲೆ ಆರಂಭಿಸುವ ಬಗ್ಗೆ ಈಗಾಗಲೇ 40 ಶಾಸಕರ ಜೊತೆ ಚರ್ಚಿಸಿದ್ದೇನೆ. ಮುಂಜಾಗೃತಾ ಕ್ರಮ ಕೈಗೊಂಡು ಹೇಗೆ ಆರಂಭಿಸಬಹುದೇ ಎಂದು ಕೇಳಿದ್ದೇನೆ. ಆದರೆ ಶಾಸಕರಾರೂ ಶಾಲೆಗಳನ್ನು ಆರಂಭಿಸುವ ಬಗ್ಗೆ ಒಲವು ತೋರಿಲ್ಲ. ಮಕ್ಕಳ ಆರೋಗ್ಯ, ಪೋಷಕರ ಕಾಳಜಿ ನಮಗೆ ಮುಖ್ಯ. ಈ ನಿಟ್ಟಿನಲ್ಲಿ ಮುಂದೆ ಶಾಲೆ ಆರಂಭವಾದರೂ ಎಲ್ಲಾ ರೀತಿಯ ಮುಂಜಾಗೃತೆ ವಹಿಸಿ ತೆರೆಯುವ ಬಗ್ಗೆ ಯೋಚಿಸುತ್ತೇವೆ ಹೊರತು ಸಧ್ಯಕ್ಕೆ ಶಾಲೆಗಳು ಆರಂಭವಾಗಲ್ಲ. ನಿಮ್ಮ ಮಕ್ಕಳ ಯೋಗಕ್ಷೇಮ ನಮ್ಮ ಜವಾಬ್ದಾರಿ ಎಂಬುದನ್ನು ಪೋಷಕರಿಗೆ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ