Latest

ಹಬ್ಬಹರಿದಿನಗಳು, ಜಾತ್ರಾ ಮಹೋತ್ಸವಗಳು ನಮ್ಮ ದೇಶದ ಸಂಸ್ಕೃತಿಯ ದ್ಯೋತಕಗಳು -ಶ್ರೀಶೈಲ ಶ್ರೀ

ಪ್ರಗತಿವಾಹಿನಿ ಸುದ್ದಿ, ಯಡೂರು
 ನಮ್ಮ ಜೀವನದಲ್ಲಿ ದಿನ ಪ್ರಾರಂಭಗೊಳ್ಳುವುದೇ ರೈತರಿಂದ. ಆದರೆ ಇಂದು ರೈತರ ಜೀವನ ಕಷ್ಟಕರವಾಗಿದ್ದು ದುರದೃಷ್ಟಕರ. ರೈತರು ಕೊಟ್ಟವರು, ಎಂದಿಗೂ ಬೇಡಿದವರಲ್ಲ. ಅದಕ್ಕೇ ಅವರನ್ನು ಅನ್ನದಾತರೆನ್ನುವುದು ಎಂದು ರೈತರಾದ ಕವಿತಾಳ ಗ್ರಾಮದ ಕವಿತಾ ಮಿಶ್ರಾ ಹೇಳಿದರು. 
ಸಮೀಪದ ಇತಿಹಾಸ ಪ್ರಸಿದ್ಧ ಯಡೂರಿನ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಮೊದಲ ದಿನ ಭಾನುವಾರ ಸಂಜೆ ಹಮ್ಮಿಕೊಂಡ ಲಾಭದಾಯಕ ಕೃಷಿ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುಕುಲ ಭಾಸ್ಕರ, ಗುರುಕುಲ ಭೂಷಣ, ಬಾಲ ಭಾಸ್ಕರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಕೃಷಿಯ ಕುರಿತು ಉಪನ್ಯಾಸ ನೀಡಿದರು.
ರೈತರ ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಜೀವನದಲ್ಲಿ ಯಾವುದೇ ಕಷ್ಟ ದೊಡ್ಡದಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರೈತರು ರಾಸಾಯನಿಕ ಗೊಬ್ಬರ ಹೊರತುಪಡಿಸಿ ಸಾವಯವ ಕೃಷಿಯನ್ನು ತಮ್ಮದಾಗಿಸಿಕೊಳ್ಳಬೇಕು. ಪ್ರತಿಯೊಂದು ಋತುವಿನಲ್ಲಿ ಆದಾಯ ಬರುವಂತೆ ಬೇರೆ ಬೇರೆ ಬೆಳೆಗಳನ್ನು ಬೆಳೆದು ಆರ್ಥಿಕ ಸ್ವಾಲಂಬಿಗಳಾಗಬೇಕು. ನಮ್ಮ ನಾಡಿನಲ್ಲಿ ಸಮೃದ್ಧವಾಗಿ ಬೆಳೆಯುವ ಶ್ರೀಗಂಧವನ್ನು ಬೆಳೆಯಲು ರೈತರು ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಕೃಷಿ ಈ ದೇಶದ ಸಂಪತ್ತಾಗಿದ್ದು ಕೃಷಿಕರು ಅನ್ನದಾತರಾಗಿದ್ದಾರೆ. ಸಾವಯವ ಕೃಷಿ ಇಂದಿನ ಅವಶ್ಯಕತೆಯಾಗಿದೆ. ಹಬ್ಬಹರಿದಿನಗಳು, ಜಾತ್ರಾ ಮಹೋತ್ಸವಗಳು ನಮ್ಮ ದೇಶದ ಸಂಸ್ಕೃತಿಯ ದ್ಯೋತಕಗಳು. ನಮ್ಮ ಧರ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುವುದು ಭಾರತೀಯರ ಕರ್ತವ್ಯವಾಗಿದೆ. ತನ್ನ ಬಿಟ್ಟು ದೇವರಿಲ್ಲ, ಮಣ್ಣು ಬಿಟ್ಟು ಮಡಿಕೆಯಿಲ್ಲ. ನಮ್ಮಲ್ಲಿರುವ ಪರಮಾತ್ಮನನ್ನು ಅರಿತುಕೊಳ್ಳುವುದೇ ಜೀವನದ ಮೌಲ್ಯ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ರಾಜಕಾರಣಕ್ಕಿಂತ ಧರ್ಮ ಮುಖ್ಯ. ಎಲ್ಲರೂ ಧರ್ಮದ ದಾರಿಯಲ್ಲಿ ನಡೆಯಬೇಕಿದೆ. ಜೀವನದಲ್ಲಿ ಶಿಸ್ತು ಬದ್ಧತೆ ಎಲ್ಲರಿಗೂ ಅವಶ್ಯಕ ಎಂದರು. 
ಅಧ್ಯಕ್ಷತೆ ವಹಿಸಿದ್ದ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಪ್ರತಿಯೊಂದು ಊರಿನಲ್ಲಿಯೂ ಮಠ, ಮಂದಿರಗಳು ಇರಬೇಕು. ಧರ್ಮದ ಜ್ಯೋತಿ ಬೆಳಗುವುದು ಮಠ ಮಂದಿರಗಳಿಂದ ಎಂದು ಹೇಳಿದರು.
ಜಾಲಹಳ್ಳಿ ಬೃಹನ್ಮಠದ ಶಿವಾಭಿನವ ಜಯಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಯರಿಗೆ ಗುರುಕುಲ ಭಾಸ್ಕರ, ರೌಡಕುಂದದ ಮರಿಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿಯರಿಗೆ ಗುರುಕುಲ ಭೂಷಣ, ಬಳ್ಳಾರಿಯ ಕಲ್ಯಾಣ ಮಹಾಸ್ವಾಮೀಜಿಯವರಿಗೆ ವೀರಶೈವ ಧರ್ಮ ಸಂಜೀವಿನಿ ಪ್ರಶಸ್ತಿ ಹಾಗೂ ಎಮ್ಮಿಗನೂರಿನ ಶಿಶುತಾನಸೇನ ಎನಿಸಿಕೊಂಡ ಜ್ಞಾನೇಶ ಅವರಿಗೆ ಬಾಲ ಭಾಸ್ಕರ ಪುರಸ್ಕಾರ ನೀಡಿ ಗೌರವಿಸಲಾಯಿತು. 
ಬೆಂಗಳೂರಿನ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಸಂಗನಬಸವ ಶಿವಚಾರ್ಯ ಸ್ವಾಮೀಜಿ, ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ, ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ಣವರ, ಹುಬ್ಬಳ್ಳಿಯ ಡಾ. ಎಂ.ಆರ್. ಪಾಟೀಲ, ಗೀತಾಂಜಲಿ ರಾವ್, ಸುನೀಲ ಬಿರದೆ, ರಾಜಶೇಖರ ಹೆಬ್ಬಾರ, ಡಾ. ಕಾಶಿಲಿಂಗ ಮಠ, ತಾಪಂ ಸದಸ್ಯರಾದ ರವೀಂದ್ರ ಮಿರ್ಜೆ, ಪ್ರಭಾಕರ ಭೀಮನ್ನವರ, ಗಣಪತಿ ಧನವಡೆ, ಪಾಂಡುರಂಗ ಕೋಳಿ, ಭೀಮಗೌಡಾ ಪಾಟೀಲ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button