Latest

ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಬದ್ಧ : ಸಂಸದ ಜೊಲ್ಲೆ

ಕೃಷಿ ಸಂಬಂದಿತ ಮಸೂದೆಗಳು ರೈತರ ಪರವಾಗಿವೆ –  ಅಣ್ಣಾಸಾಹೇಬ ಜೊಲ್ಲೆ

 

 ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ- ಕೇಂದ್ರ ಸರ್ಕಾರದಿಂದ  ಪ್ರಧಾನ ಮಂತ್ರಿ ಮೋದಿ ನೇತೃತ್ವದ ಸರ್ಕಾರವು ರೈತರ ’ಆದಾಯ ದ್ವಿಗುಣಗೊಳಿಸಲು’ ನಿರಂತರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಹಿಂದೆ ರೈತರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಬಾರದು ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ  ಉದ್ದೇಶವಿದೆ ಎಂದು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

ಕಿಸಾನ ಹೆಲ್ತ್ ಕಾರ್ಡ್, ಕಿಸಾನ ಕ್ರೆಡಿಟ್ ಕಾರ್ಡ, ಪಿಎಂ- ಕಿಸಾನ ಸಮ್ಮಾನ ನಿಧಿ, ಫಸಲ್ ಬಿಮಾ ಯೋಜನೆ, ಮೈಕ್ರೋ ಇರಿಗೇಶನ, ಇ-ಮಾರುಕಟ್ಟೆ ರಚನೆ (ಇ-ಮಂಡೀಜ್), ಸ್ವಾಮಿನಾಥನ್ ಸಮಿತಿ ಶಿಫಾರಸು ಅನುಷ್ಠಾನ ಮತ್ತು ಇಂತಹ ಅನೇಕ ಯೋಜನೆಗಳಿದ್ದು, ಅವುಗಳ ಮೂಲಕ ರೈತರು ಕೃಷಿಯನ್ನು ಹೊರತುಪಡಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕಡಿಮೆ ಅವಧಿಯಲ್ಲಿ ರೈತರ ಅಭಿವೃದ್ಧಿ ಹಾಗೂ ಹೆಚ್ಚಿನ ಆದಾಯ ದೊರಕಿಸಿ ಕೊಡಲು ಮೋದಿ ಸರ್ಕಾರವು ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಹಾಯ ಸೌಲಭ್ಯ

ರೈತ ವರ್ಗದವರಿಗೆ ಅತೀ ಹೆಚ್ಚಿನ ಸಹಾಯ ಸೌಲಭ್ಯಗಳನ್ನು ಮೋದಿ ಸರ್ಕಾರ ಘೋಷಿಸಿ ಅನುಷ್ಠಾನಗೊಳಿಸಿದ್ದು, ರೈತರಿಂದ ನೇರವಾಗಿ ಎಣ್ಣೆ ಕಾಳು ಮತ್ತು ದವಸ -ಧಾನ್ಯವನ್ನು ಎಂದಿಗಿಂತಲೂ ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದೆ.
ಹಿಂದಿನ ವರ್ಷಕ್ಕಿಂತ ೩೯೦ ಲಕ್ಷ ಟನ್‌ಗಳಷ್ಟು ಗೋದಿಯನ್ನು ರೈತರಿಂದ ಖರೀದಿಸಿ ಸುಮಾರು ೭೫,೦೦೦ ಕೋಟಿ ಮೊತ್ತವನ್ನು ರೈತರಿಗೆ ಪಾವತಿಸಿದೆ. ೧೦,೦೦೦ಕ್ಕಿಂತ ಹೆಚ್ಚಿನ ಎಫ್ ಪಿ ಓ ಗಳನ್ನು ರಚಿಸಿ ಸುಮಾರು ೬೮೫೦ ಕೋಟಿ ಹಣ ವೆಚ್ಚ ಮಾಡಲಾಗಿದೆ.
ದೇಶದೆಲ್ಲೆಡೆ ಆಹಾರ ಮತ್ತು ಸಂಸ್ಕರಣಾ ಪಾರ್ಕ ಸ್ಥಾಪನೆಗೆ ಅವಕಾಶ ಕಲ್ಪಿಸುವುದರ ಮೂಲಕ ಅತೀ ಸಣ್ಣ, ಸಣ್ಣ ಆಹಾರ ಉತ್ಪನ್ನ ಕೈಗಾರಿಕೆಗಳಿಗೆ ಉತ್ತೇಜನ ಕಲ್ಪಿಸಿ ಹೆಚ್ಚಿನ ಉದ್ಯೋಗಾವಕಾಶಕ್ಕೆ ನೀಡಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳು:

ಒಂದು ಲಕ್ಷ ಕೋಟಿ ರೂ.ಗಳ ’ಕೃಷಿ ಮೂಲಸೌಕರ್ಯ ನಿಧಿ’ ಅಡಿಯಲ್ಲಿ ಹಣಕಾಸಿನ ಸೌಲಭ್ಯಕ್ಕಾಗಿ ಕೇಂದ್ರ ವಲಯ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪಿಎಂ- ಕಿಸಾನ ಸಮ್ಮಾನ ನಿಧಿ : ಯೋಜನೆಯಿಂದ ೯೩ ಸಾವಿರ ಕೋಟಿಗಳಷ್ಟು ಬಿಡುಗಡೆ ಮಾಡಿ, ಸುಮಾರು ೯ ಕೋಟಿ ರೈತರು ಇದರ ಲಾಭ ಪಡೆದುಕೊಂಡಿದ್ದಾರೆ.
ಕಿಸಾನ ಕ್ರೆಡಿಟ್ ಕಾರ್ಡ ಯೋಜನೆ : ಕಳೆದ ೬ ತಿಂಗಳಿನಲ್ಲಿ ೧.೨೬ ಕೋಟಿ ಹೊಸ ಕಿಸಾನ ಕ್ರೆಡಿಟ್ ಕಾರ್ಡ ರೈತರಿಗೆ ನೀಡಿದೆ.
ಫಸಲ್ ಬೀಮಾ ಯೋಜನೆ, ಮೈಕ್ರೋ ಇರಿಗೇಶನ್, ಇ-ಮಾರುಕಟ್ಟೆ ರಚನೆ (ಇ-ಮಂಡೀಜ್).
ಕನಿಷ್ಠ ಬೆಂಬಲ ಬೆಲೆಯ ಸ್ವಾಮಿನಾಥನ್ ಸಮಿತಿ ಶಿಫಾರಸು ಅನುಷ್ಠಾನ ಮಾಡಿದೆ.
೨೦೨೧-೨೨ ರ ಮಾರುಕಟ್ಟೆ ಹಂಗಾಮಿಗೆ ೬ ರಭಿ ಬೆಳೆಗೆ ಅದ್ಬುತ್ ಬೆಂಬಲ ಬೆಲೆ ನೀಡಿದೆ.
ಮಧ್ಯಂತರ ಮಧ್ಯವರ್ತಿ/ದಲ್ಲಾಳಿಗಳ ಕಾಟ ತಪ್ಪಿಸಿ ನೇರವಾಗಿ ರೈತರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು ಉತ್ತಮ ಬೆಲೆ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಅಲ್ಲದೇ ಸರ್ಕಾರವು ಈಗಾಗಲೇ ಘೋಷಿಸಿರುವಂತೆ ಬೆಂಬಲ ಬೆಲೆಯನ್ನು ನಿಗದಿಗೊಳಿಸುವ ಪ್ರಕ್ರಿಯೆ ಮುಂದುವರೆಸಲಿದೆ.
ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಸಂಸ್ಕರಣಾ ಘಟಕಗಳಂತಹ, ಸುಗ್ಗಿ ನಂತರದ ಬೆಳೆ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳ ನಿರ್ಮಾಣಕ್ಕೆ ಈ ನಿಧಿ ವೇಗ ನೀಡಲಿದೆ.
ಈ ಸ್ವತ್ತುಗಳ ಮೂಲಕ ರೈತರು ತಮ್ಮ ಬೆಲೆಗೆ ಹೆಚ್ಚಿನ ಮೌಲ್ಯ ಪಡೆಯಬಹುದಾಗಿದೆ.
ಕೇಂದ್ರ ಸರ್ಕಾರದ ಮಸೂದೆಗಳಿಂದ ಕೃಷಿ ಕ್ಷೇತ್ರದ ಏಳಿಗೆ ಜತೆಗೆ ದೇಶದ ಜಿಡಿಪಿಗೆ ಶೇ.೧೫ ರಷ್ಟು ಕೊಡುಗೆ ನೀಡುವ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ. ದಾಸ್ತಾನು, ಮಾರಾಟ ದಿಸೆಯಲ್ಲಿ ನವೋದ್ಯಮಿಗಳ ಸೃಷ್ಟಿ ಆಗಲಿದೆ.
ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್‌ಯಡಿ ೨೦ ಲಕ್ಷ ಕೋಟಿ ರೂ. ಪರಿಹಾರ ಘೋಷಿಸಲಾಗಿದೆ. ಈ ಪ್ಯಾಕೇಜ್‌ನಲ್ಲಿಯೂ ಕೂಡ ರೈತರಿಗಾಗಿ ೩೦ ಸಾವಿರ ಕೋಟಿ ರೂ.ಗಳ ಹೆಚ್ಚುವರಿ ವರ್ಕಿಂಗ್ ಕ್ಯಾಪಿಟಲ್ ಫಂಡಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಮಸೂದೆಗಳು:

೧) ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ,
೨) ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಹಾಗೂ
೩) ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ಪ್ರಮುಖವಾಗಿದ್ದು, ರೈತರ ಹಿತಾಸಕ್ತಿಗೆ ಪೂರಕವಾಗಿವೆ.

ಈ ಕಾಯ್ದೆ ತಿದ್ದುಪಡಿಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಅವಕಾಶವಿದ್ದು ಮತ್ತು ಕೃಷಿ ಭೂಮಿ ಖರೀದಿಗೆ ಹೆಚ್ಚು ಅವಕಾಶವಾಗುತ್ತದೆ.
ಕೃಷಿಯೇತರರಿಗೂ ಭೂಮಿ ಖರೀದಿಸಲು ಅವಕಾಶದಿಂದ ಹೆಚ್ಚಿನ ಗ್ರಾಮೀಣ ಜನ ಕೃಷಿಯಲ್ಲಿ ತೊಡಗಿಕೊಂಡು ಹೆಚ್ಚಿನ ಆದಾಯ ತರುವಂತೆ ಕೃಷಿ ಮಾಡಲು ಅನುಕೂಲಕರವಾಗಿದೆ. ಇದನ್ನು ಹೊರತುಪಡಿಸಿ ಹೈನೋದ್ಯಮ, ಕುರಿ, ಮೇಕೆ, ಕೋಳಿ ಸಾಕಣೆಯಂತಹ ಉಪಕಸುಬುಗಳಲ್ಲಿ ಯುವಕರು ತೊಡಗಿಸಿಕೊಳ್ಳಲು ವಿಪುಲ ಅವಕಾಶವಾಗುತ್ತದೆ ಎಂದಿದ್ದಾರೆ.
ರೂ. ೨೫ ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ಸಡಿಲಿಸಿರುವುದರಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿ ರೈತರ ಜಮೀನುಗಳಿಗೆ ಬೆಲೆ ಹೆಚ್ಚಳದ ಸಾಧ್ಯತೆ ಇದೆ.
ಕೃಷಿ ಕ್ಷೇತ್ರದಲ್ಲೂ ಹೂಡಿಕೆದಾರರ ಸೃಷ್ಟಿ, ಕೈಗಾರಿಕೆಗೆ ಸರಿ ಸಮನಾಗಿ ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ನೀಡುವದಾಗಿದೆ. ಇದರಿಂದ ಪ್ರತೀ ವರ್ಷ ಕೃಷಿ ವಿಶ್ಯವಿದ್ಯಾಲಯದಿಂದ ಹೊರಬರುವ ಸುಮಾರು ೪ ಸಾವಿರ ಪದವಿಧರರಿಗೆ ಕೃಷಿ ಜಮೀನು ಖರೀದಿಸಿ ಕೃಷಿಯಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button