ಮುಂದುವರೆಯಲಿ ಮಧುರ ಅನುಭೂತಿ ನೀಡುವ ಪತ್ರ ಸಂಸ್ಕೃತಿ

ಜಯಶ್ರೀ ಜೆ.ಅಬ್ಬಿಗೇರಿ ಬೆಳಗಾವಿ
ಕೇವಲ ಎರಡು ಮೂರು ದಶಕಗಳ ಹಿಂದೆ ಬೇರೆ ಉರಲ್ಲಿರುವ ನಮ್ಮ ನೆಂಟರ ಸ್ನೇಹಿತರ ಕ್ಷೇಮ ಸಮಾಚಾರ, ದುಃಖ, ದುಗುಡ ದುಮ್ಮಾನಗಳನ್ನು ಸಂತಸದ ಸಂಭ್ರಮಿಸುವ ಕ್ಷಣಗಳನ್ನು ಹದಿನೈದು ಪೈಸೆಯ ಹಳದಿ ಕಾರ್ಡಿನಲ್ಲಿ ಇಲ್ಲವೇ ಐವತ್ತು ಪೈಸೆಯ ಇನ್ ಲ್ಯಾಂಡ್ ಪತ್ರದ ಮುಖೇನ ಒಬ್ಬರಿಗೊಬ್ಬರು ಹಂಚಿಕೊಳ್ಳಲಾಗುತ್ತಿತ್ತು. ಅದರಲ್ಲೂ ಪ್ರೇಮಿಗಳು,  ಮದುವೆ ನಿಶ್ಚಯವಾದವರು ಅಂಚೆಯಣ್ಣನ ಸಲುವಾಗಿ ಕೆಲವೊಂದು ಬಾರಿ ತುದಿಗಾಲಲ್ಲಿ ನಿಂತು, ಶತಪಥ ಹಾಕುತ್ತ ಕಾದದ್ದೂ ಉಂಟು. ಕೆಲವೊಮ್ಮೆ ಪ್ರೇಮ ಪತ್ರಗಳು ಅವರಿವರ ಕೈಗೆ ಸಿಕ್ಕು ಪೇಚಿಗೆ ಸಿಲುಕಿ ಜೀವನ ಪೂರ್ತಿ ಸವಿ ನೆನಪಾಗಿ ಉಳಿದಿದ್ದೂ ಇದೆ. ಪತ್ರ ಸಂಸ್ಕೃತಿಯಲ್ಲಿ ಬದುಕಿನ ಮಹತ್ವದ ತಿರುವುಗಳನ್ನು, ಕಣ್ಣಲ್ಲಿ ತುಂಬಿದ ಕನಸುಗಳನ್ನು, ಎದೆಗಿಳಿದ ಭಾವನೆಗಳನ್ನು ಅಕ್ಷರಗಳ ಮೂಲಕ ತಲುಪಿಸುವ ವ್ಯವಸ್ಥೆ ನಿಜಕ್ಕೂ ಭಾವನಾತ್ಮಕವಾಗಿತ್ತು.
ದೂರವಿದ್ದರೂ ಹತ್ತಿರ ಹತ್ತಿರ ಕರೆದುಕೊಂಡು ಹೋಗುತ್ತಿದ್ದ ಮಾಯಾಲೋಕದಂತಿದ್ದ ಓಲೆ ಪ್ರಪಂಚ ಇದೀಗ ಇತಿಹಾಸದ ಪುಟವನ್ನು ಸೇರುವ ಸ್ಥಿತಿಗೆ ಬಂದಿದೆ. ಬರೆದ ಪ್ರತಿಯೊಂದು ಪದವೂ ನಮ್ಮ ಮನದಲ್ಲಿ ಪುಟಿಯುತ್ತಿದ್ದ ಭಾವಗಳಿಗೆ ಕನ್ನಡಿಯಂತಿರುತ್ತಿತ್ತು. ಸ್ನೇಹ ಬಾಂಧವ್ಯಗಳನ್ನು ವೃದ್ದಿಸಲು ಸಹಕಾರಿಯಾಗಿತ್ತು.  ಪತ್ರ ಓದುವಾಗ ಬರೆದವನ ವಿಚಾರಗಳನ್ನು ಮುಕ್ತವಾಗಿ ಹೇಳುತ್ತಿತ್ತು. ಬದುಕಿನ ಎಷ್ಟೋ ಸುಖ ಸಂತಸಗಳನ್ನೆಲ್ಲ ಹೊತ್ತು ತರುತ್ತಿದ್ದ ಪತ್ರಗಳು ಜನ ಮಾನಸದಲ್ಲಿ ಪ್ರೀತಿ ವಿಶ್ವಾಸ ಭರವಸೆಗಳನ್ನು ಹೆಚ್ಚಿಸುತ್ತಿದ್ದವು. ನಮ್ಮ ಅಜ್ಜ ಮುತ್ತಜ್ಜನ ಕಾಲದಲ್ಲಿ ಟ್ರಂಕಾಲ್ ಟೆಲಿಗ್ರಾಮ್‌ಗಳು ಕಾಲಿಟ್ಟವು. ಇವು ಅತಿ ತ್ವರಿತವಾಗಿ ಸುದ್ದಿಯನ್ನು ಮುಟ್ಟಿಸಲು ಬಳಸಲ್ಪಟ್ಟವು. ಎಷ್ಟೋ ಸಲ ಇವೆಲ್ಲ ಎಡವಟ್ಟುಗಳಾದಾಗ ದುಃಖದ ಸನ್ನಿವೇಶವನ್ನು ಮಾತ್ರ ತರುತ್ತವೆ ಎಂಬ ಭಯವನ್ನು ಸೃಷ್ಟಿಸುತ್ತಿದ್ದವು. ಉಳಿದ ಸಂದರ್ಭಗಳಲ್ಲೆಲ್ಲ ಒಂದು ಕೋಣೆಯಲ್ಲಿ ಪತ್ರ ಬರೆಯೋಕೆ ಕೂತರೆ ವರ್ಣಿಸಲಾಗದ ಮಧುರ ಅನುಭವವಾಗುತ್ತಿತ್ತು.
ಪತ್ರಗಳು ಕೇವಲ ಸಂಪರ್ಕ ಸಾಧನಗಳಾಗದೆ, ಭಾವ ಲೋಕ ಪರಿಚಯಿಸಲು ಇದ್ದ ಸಶಕ್ತ ಮಾಧ್ಯಮಗಳಾಗಿದ್ದವು. ಇಂದು ವಾಟ್ಸಪ್ ಫೇಸ್‌ಬುಕ್ ಗಳ ಹೆಸರಲ್ಲಿ ಹೆಸರಿಲ್ಲದಂತಾಗುತ್ತಿದೆ. ಒಂದು ಕಾಲದಲ್ಲಿ ದೊಡ್ಡದಾದ ಜಗತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಚಿಕ್ಕದಾಗಿ ಅಂಗೈಯಲ್ಲಿ ಕೂತಿದೆ.ಜಗದ ಯಾವ ಮೂಲೆಯಲ್ಲೇ ಇರಲಿ ಕ್ಷಣಾರ್ಧದಲ್ಲಿ ಎಸ್ ಎಮ್ ಎಸ್ ಇಲ್ಲವೇ ಇ ಮೇಲ್ ಕಳಿಸಿ ಸಂಪರ್ಕಿಸಬಹುದು. ಪತ್ರದಲ್ಲಿದ್ದ ಮನೋಲ್ಲಾಸ, ಚಿಮ್ಮುವ ಉತ್ಸಾಹ ಇದರಲ್ಲಿ ಕಾಣಲು ಸಾಧ್ಯವಿಲ್ಲ. ಓಲೆಯಲ್ಲಿದ್ದ ಸಾಲುಗಳು ಸಾಲು ಸಾಲಾಗಿ ಆತ್ಮೀಯತೆಯನ್ನು ಹೊತ್ತು ತರುತ್ತಿದ್ದವು. ಮನ ಸೆಳೆಯುತ್ತಿದ್ದವು. ಕಣ್ಣಲ್ಲಿ ಮಿಂಚು ಸಂಚರಿಸುವಂತೆ ಮಾಡುತ್ತಿದ್ದವು. ಹೈಟೆಕ್ ಜಮಾನಾ ನಮ್ಮ ಕೆಲಸಗಳನ್ನು ಸುಲಭವಾಗಿಸಿದೆ. ಆದರೆ ಭಾವ ಸೇತುವೆಯನ್ನು ಸಡಿಲಗೊಳಿಸುತ್ತಿದೆ.
ನಗರಗಳಿಗೆ ಉನ್ನತ ಅಭ್ಯಾಸಕ್ಕಾಗಿ ಬಂದ ಮಕ್ಕಳು ತಂದೆ ತಾಯಿಗೆ ಬರೆದ ಪತ್ರಗಳು ಮನ ಮಿಡಿಸುತ್ತಿದ್ದವು. ಹೆತ್ತವರ ಪತ್ರಗಳು ಮಕ್ಕಳಿಗೆ ಎಲ್ಲಿಲ್ಲದ ಖುಷಿ ನೀಡುತ್ತಿದ್ದವು. ಸ್ನೇಹ ಲೋಕದಲ್ಲಂತೂ ಪತ್ರಗಳ ಭರಾಟೆ ಹೆಚ್ಚಿರುತ್ತಿತ್ತು. ಗುರು ಶಿಷ್ಯರ ನಡುವೆ ಮಧುರ ಅನುಭೂತಿ ಹಂಚುತ್ತಿದ್ದವು.ಜೋಪಾನವಾಗಿಟ್ಟ ಹಿಂದಿನ ಪತ್ರಗಳನ್ನು ತೆರೆದು ಓದಿ ಸುಖಿಸುವಾಗ ಮನದಲ್ಲಿ ಎಲ್ಲಿಲ್ಲದ ಖುಷಿ ಮನೆ ಮಾಡುತ್ತದೆ.ಕಳೆದ ಸವಿ ನೆನಪುಗಳ ಕಣ್ಮುಂದೆ ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತವೆ. ಈ ಭಾವ ಶಕ್ತಿ ಎಸ್ ಎಮ್ ಎಸ್ ಮತ್ತು ಇ ಮೇಲ್‌ಗಳಲ್ಲಿ ಸಿಗುವ ಸಾಧ್ಯತೆ ಕಡಿಮೆ.
ಅತಿ ವೇಗದ ಬದುಕಿನಲ್ಲಿ ಇ ಮೇಲ್ ತೆರೆದು ನೋಡಲು ಪುರುಸೊತ್ತಿಲ್ಲ ಅಂಥದ್ದರಲ್ಲಿ ಪತ್ರ ಬರೆಯುವುದೇ ಎನ್ನುತ್ತಿರಾ? ಸ್ವಲ್ಪ ಬಿಡುವು ಸಿಕ್ಕಾಗ ತುರ್ತು ವಿಷಯಗಳಲ್ಲಿದಿರುವಾಗ ಹೆತ್ತವರಿಗೆ ಗೆಳೆಯರಿಗೆ ಸಂಬಂಧಿಕರಿಗೆ ಪತ್ರ ಬರೆಯುವ ಹವ್ಯಾಸ ಬೆಳೆಸಿಕೊಳ್ಳೋಣ. ಮನದ ಮೂಲೆಯಲ್ಲಿ ಧೂಳು ತಿನ್ನುವಂತೆ ಬಿದ್ದಿರುವ ಭಾವಗಳಿಗೆ ಜೀವ ತುಂಬೋಣ. ಕೊಂಡಿ ಕಳಚಿಕೊಳ್ಳುತ್ತಿರುವ ಸಂಬಂಧಗಳಲ್ಲಿ ಬಂಧ ಹೆಚ್ಚಿಸೋಣ. ಪತ್ರಗಳಲ್ಲಿ ಮೂಡಿರುವ ಮುದ್ದಾದ ಅಕ್ಷರಗಳ ಅಂದ, ಚಂದ., ಹರಿ ಬಿಟ್ಟಿರುವ ಭಾವಗಳ ಮೈದುಂಬಿಸಿಕೊಂಡು ಓದಿ ನಲಿಯೋಣ. ಪತ್ರಗಳ ಬದುಕನ್ನು ಉಳಿಸೋಣ. ಬದುಕಿನುದ್ದಕ್ಕೂ ಪತ್ರಗಳು ನೀಡುವ ಸುಂದರ ಅನುಭವವನ್ನು ಅನುಭವಿಸೋಣವಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button