Kannada NewsKarnataka NewsLatest

ಹೆಣ್ಣನ್ನು ನೋಡುವ ಮನೋಸ್ಥಿತಿ ಬದಲಾಗಿಲ್ಲ – ನೀತಾ ರಾವ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಮ್ಮ ಹಕ್ಕುಗಳನ್ನು ನಾವು ಪ್ರತಿಪಾದಿಸಬೇಕು. ಮಹಿಳೆ ಬದಲಾಗುತ್ತಿದ್ದೇನೆಂಬ ಮುಖವಾಡ ಕಳಚಿ ವಾಸ್ತವ ನೆಲೆಯಲ್ಲಿ ಬದುಕಬೇಕು. ಅಡುಗೆ ಕೋಣೆಯಿಂದ ರಾಫೆಲ್ ಪೈಲೆಟ್‌ವರೆಗೆ ಏರಿದರೂ ಇಂದಿಗೂ ಹೆಣ್ಣನ್ನು ನೋಡುವ ಮನೋಸ್ಥಿತಿ ಸಮಾಜದಲ್ಲಿ ಬದಲಾಗಿಲ್ಲ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ನೀತಾ ರಾವ್ ವಿಷಾದಿಸಿದರು.
ಬುಧವಾರ ೧೪ರಂದು ನಗರದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಮಹಿಳಾ ಸಬಲೀಕರಣ ಕೋಶ ಉದ್ಘಾಟಸಿ ಮಾತನಾಡುತ್ತ, ಮಹಿಳಾ ಸಬಲೀಕರಣ ಘಟಕದ ವತಿಯಿಂದ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.

ಮಹಾವಿದ್ಯಾಲಯದಲ್ಲಿನ ಹೆಣ್ಣು ಮಕ್ಕಳು ಪದವಿಯ ಮಧ್ಯದಲ್ಲಿಯೇ ಓದನ್ನು ನಿಲ್ಲಿಸದ ಹಾಗೆ ಮಹಾವಿದ್ಯಾಲಯ ನೋಡಿಕೊಳ್ಳಬೇಕೆಂದರು. ಹೆಣ್ಣು ಮಕ್ಕಳಲ್ಲಿ ಒಳ್ಳೆಯ ಶಿಕ್ಷಣ ಕೊಡಿಸುವುದರ ಮೂಲಕ ಹೆಣ್ಣಿನ ಸಬಲೀಕರಣದ ಕುರಿತು ಜಾಗೃತಿ ಮೂಡಿಸಬಹುದು. ಈ ಸಂಘಟನೆಯಿಂದ ವಿದ್ಯಾರ್ಥಿನಿಯರಿಗೆ ಕೌನ್ಸಲಿಂಗ್‌ಗಳು ಕೂಡ ನಡೆಯಬೇಕು ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾದ ಬೆಳಗಾವಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಂಗಳಾ ಹುಗ್ಗಿ ಅವರು ಮಾತನಾಡುತ್ತ, ಶಿಕ್ಷಣ ಕೇವಲ ಜ್ಞಾನಾರ್ಜನೆ ಅಥವಾ ಪದವಿಗೆ ಮಾತ್ರ ಸೀಮಿತವಾಗದೆ ಅದು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು ಎಂದರು.

ಪುರಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಡೆಗಣಿಸಲಾಗಿದೆ. ಅಂತಃಪುರದಲ್ಲಿ ಸ್ತ್ರೀಯರಿಗೆ ಕಸೂತಿಯ ಕೆಲಸ ಹಾಡುಗಾರಿಕೆಗಳಂತಹ ಕೆಲಸಗಳನ್ನು ಕಲಿಸಿಕೊಡಲಾಗುತ್ತಿತ್ತು ಎಂದು ಇತಿಹಾಸದ ಉದಾಹರಣೆಗಳನ್ನು ನೀಡಿದರು. ಆದರೆ ಹೆಣ್ಣಿನ ಸುರಕ್ಷತೆ ಅವಳ ಸ್ಥಾನಮಾನ ಅವಳೆ ನಿರ್ಧರಿಸಬೇಕು. ಹೆಣ್ಣನ್ನು ಪೂಜಿಸುವುದಕಿಂತಲೂ ಅವಳನ್ನು ಗೌರವಿಸಬೇಕು. ವಾಸ್ತವದಲ್ಲಿ ಮಹಿಳೆ ಪುರುಷರಿಗಿಂತಲೂ ಎಲ್ಲ ಕೆಲಸಗಳನ್ನು ನಿಭಾಯಿಸುವಂತ ಮಹೋನ್ನತ ಶಕ್ತಿ ಹೊಂದಿದ್ದಾಳೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಯದ ಪ್ರಾಚಾರ್ಯ ಡಾ. ಎಂ. ಜಯಪ್ಪ ಅವರು ಮಾತನಾಡುತ್ತ, ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯವನ್ನು ಇಡೀ ಬೆಳಗಾವಿಯಲ್ಲಿಯೇ ಮಾದರಿ ಮಹಾವಿದ್ಯಾಲಯವನ್ನಾಗಿ ಮಾಡಬೇಕಾಗಿದೆ. ಹಿಂದಿನ ಹಾಗೂ ಇಂದಿನ ಜಾಗತಿಕ ಮಹಿಳೆಯೂ ಎದುರಿಸುವ ಸಮಸ್ಯೆಗಳು ಬಹುಭಿನ್ನವಾಗಿದೆ. ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕಾದ ಜವಾಬ್ದಾರಿ ಮಹಿಳೆಯರ ಮೇಲೆಯೇ ಇದೆ. ಪ್ರಕೃತಿದತ್ತವಾಗಿ ಮಹಿಳೆಗೆ ಬಂದ ಬದುಕಿನ ವಾತಾವರಣವನ್ನು ಸಮಾಜ ಎಂದಿಗೂ ಕಸಿದುಕೊಳ್ಳಬಾರದು ಎಂದು ನುಡಿದರು.
ಡಾ. ಶೋಭಾ ನಾಯಕ ಅವರು ಪ್ರಾಸ್ತಾವಿಕ ಮಾತುಗಳಲ್ಲಿ ಹೆಣ್ಣು ಮಗುವಿನ ದಿನಾಚರಣೆಯ ಚರಿತ್ರೆಯನ್ನು ಪರಿಚಯಿಸಿ ಜಗತ್ತು ಎಷ್ಟೇ ಮುಂದುವರಿದರೂ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ, ಕ್ರೌರ್ಯ, ಹಿಂಸೆ ಹಾಗೂ ಶೋಷಣೆ ಇನ್ನೂ ನಿಂತಿಲ್ಲ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಯಾಸ್ಮೀನ ಬೇಗಂ ನದಾಫ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಖಿ ಕೆಳಗಿನಮನಿ ಪ್ರಾರ್ಥಿಸಿದರು. ಡಾ. ಜ್ಯೋತಿ ಪಾಟೀಲ ನಿರೂಪಿಸಿದರು. ಉಪಪ್ರಾಚಾರ್ಯ ಅನಿಲ ರಾಮದುರ್ಗ ವಂದಿಸಿದರು. ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button