Latest

ಕಲಬುರಗಿ ಜಿಲ್ಲೆಯಲ್ಲಿ 48 ಕಾಳಜಿ ಕೇಂದ್ರಗಳ ಸ್ಥಾಪನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ 1058 ಮನೆಗಳು ಹಾನಿಯಾಗಿದ್ದು. 518 ಜಾನುವಾರುಗಳು ಮೃತಪಟ್ಟಿವೆ. 48 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, 7603 ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲಾಗಿದೆ. ಮಳೆ ಮುಂದುವರೆದಿರುವುದರಿಂದ ಇನ್ನು ಹಾನಿಗೊಳಗಾಗುವ ಮನೆ ಹಾನಿ, ಬೆಳೆ ಹಾನಿ, ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಕುರಿತು ತ್ವರಿತವಾಗಿ ಸಮೀಕ್ಷೆ ನಡೆಸಿ, ಕೂಡಲೇ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಸಮನ್ವಯತೆಯಿಂದ ಮುಂಜಾಗ್ರತಾ ಕ್ರಮಗಳು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿರುವುದಾಗಿ ಡಿಸಿಎಂ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭ ಹಾಗೂ ಮಲಪ್ರಭ ನದಿಗಳ ಭೀಕರ ಪ್ರವಾಹದಿಂದ 31 ಗ್ರಾಮಗಳು ಬಾದಿತಗೊಂಡಿವೆ. ಒಟ್ಟು 270 ಕುಟುಂಬಗಳು ಭಾದಿತಗೊಂಡಿವೆ. 4 ಕಾಳಜಿ ಕೇಂದ್ರಗಳನ್ನು ತೆರೆದು 210 ಜನವರಿಗೆ ಊಟ, ಉಪಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬಾದಿತವಾದ 270 ಕುಟುಂಬಗಳಿಗೆ ತಲಾ 10ಸಾವಿರ ರೂ. ತುರ್ತು ಪರಿಹಾರವನ್ನು ಪಾವತಿಸಲಾಗಿದೆ. ಮುಧೋಳ್ ತಾಲೂಕಿನಲ್ಲಿ ಒಂದು ಜಾನುವಾರು ಮೃತಪಟ್ಟಿದ್ದು, 30 ಸಾವಿರ ರೂ. ಪರಿಹಾರ ಪಾವತಿಸಲಾಗಿದೆ. 34869 ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. 105 ಮನೆಗಳು ಪೂರ್ಣ ಪ್ರಮಾಣದಲ್ಲಿ 26 ಮನೆಗಳು ತೀವ್ರ ಹಾಗೂ 338 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಮನೆ ಹಾನಿ ಕುರಿತು ಜಂಟಿ ಸಮೀಕ್ಷೆ ಮುಗಿದ 347 ಮನೆ ಹಾನಿ ಬಗ್ಗೆ ಆರ್ ಜಿಹೆಚ್ ಸಿಎಲ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. 23 ಕೈಮಗ್ಗಳು ಹಾನಿಗೊಳಗಾಗಿವೆ. ಗ್ರಾಮೀಣಾಭಿವೃದ್ಧಿ ಇಲಾಖೆಯ 999 ಕಿ.ಮೀ ರಸ್ತೆ, 19 ಕುಡಿಯುವ ನೀರಿನ ಯೋಜನೆಗಳು ಹಾಗೂ 32 ಸೇತುವೆ ಮತ್ತು ಬಾಂದರುಗಳು ಹಾನಿಯಾಗಿವೆ.ಲೋಕೋಪೊಯೋಗಿ ಇಲಾಖೆ ವ್ಯಾಪ್ತಿಯ 94 ಕಿ.ಮೀ. ರಾಜ್ಯ ಹೆದ್ದಾರಿ, 308 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳು ಹಾಗೂ 54 ಸೇತುವೆಗಳು ಹಾನಿಯಾಗಿವೆ. 43 ಕೆನಾಲ್, 28 ಕೆರೆಗಳು, 15 ಏತನೀರಾವರಿ ಯೋಜನೆಗಳು ಹಾನಿಯಾಗಿವೆ. 1851 ಕಂಬಗಳು, 471 ಟಿ.ಸಿ.ಗಳು 69 ಕಿ.ಮೀ. ವಿದ್ಯುತ್ ಲೈನ್‍ಗಳು ಹಾನಿಯಾಗಿರುತ್ತವೆ. ಒಟ್ಟು 857 ಕೋಟಿ ರೂ. ನಷ್ಟವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಅಧಿಕಾರಿಗಳು ಸಮನ್ವಯತೆಯಿಂದ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button