ಸುರಳಿ ಹೋಳಿಗೆ
ಇದು ಉತ್ತರ ಕರ್ನಾಟಕದ ವಿಶೇಷ ಕಜ್ಜಾಯ, ಸಕ್ಕರೆ ಮತ್ತು ಮೈದಾ ಬಳಸುವುದರಿಂದ ಕೆಲವು ದಿನಗಳ ಕಾಲ ಇಡಲು ಮತ್ತು ಕೊಂಡೊಯ್ಯಲು ಸಹ ಅನುಕೂಲವಾಗಿರುತ್ತದೆ.
ಬೇಕಾದ ಸಾಮಗ್ರಿಗಳು
ಮೈದಾ ಹಿಟ್ಟು ೧ ಕಪ್, ಒಣ ಕೊಬ್ಬರಿ ತುರಿ ೧ ಕಪ್, ಸಕ್ಕರೆ ೧ ಕಪ್, ೪ ಚಮಚ ತುಪ್ಪ ಅಥವಾ ಅಡುಗೆ ಎಣ್ಣೆ
ಮಾಡುವ ವಿಧಾನ
ಎರಡು ಚಮಚ ತುಪ್ಪವನ್ನು ಬಿಸಿ ಮಾಡಿ ಮೈದಾ ಹಿಟ್ಟಿಗೆ ಹಾಕಿ ಕಲೆಸಬೇಕು. ಬಳಿಕ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹದಕ್ಕೆ (ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ) ನಾದಿಕೊಳ್ಳಬೇಕು. ನಾದಿಕೊಂಡ ಹಿಟ್ಟನ್ನು ಅರ್ಧ ತಾಸಿನ ಕಾಲ ಬಿಳಿಯ ತೆಳುವಾದ ಬಟ್ಟೆಯಲ್ಲಿ ಮುಚ್ಚಿ ಇಡಬೇಕು.
ಒಣ ಕೊಬ್ಬರಿಯ ತುರಿಗೆ ಸಕ್ಕರೆಯನ್ನು ಪುಡಿ ಮಾಡಿ ಕಲೆಸಿ ಇಟ್ಟುಕೊಳ್ಳಬೇಕು. ನಾದಿಕೊಂಡ ಮೈದಾ ಹಿಟ್ಟನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಪುರಿಯ ಆಕಾರಕ್ಕೆ ಲಟ್ಟಿಸಬೇಕು.
ಲಟ್ಟಿಸಿದ ಹಿಟ್ಟನ್ನು ದೋಸೆ ಕಾವಲಿಯ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಎರಡೂ ಮಗ್ಗಲು ಬೇಯಿಸಬೇಕು. (ಆದರೆ ಗರಿ ಗರಿ ಆಗದಂತೆ ಎಚ್ಚರಿಕೆ ವಹಿಸಿ, ಮೃದುವಾಗಿಯೇ ಇರಬೇಕು )
ಇದರ ಮೇಲೆ ಸಕ್ಕರೆ ಕೊಬ್ಬರಿ ತುರಿಯ ಮಿಶ್ರಣ ಹಾಕಿ ಸುರಳಿ ಸುತ್ತಬೇಕು. ಬಳಿಕ ಸಣ್ಣ ಉರಿಯಲ್ಲಿ ದೋಸೆ ಕಾವಲಿಯ ಮೇಲೆ ಮತ್ತೊಮ್ಮೆ ಬೇಯಿಸಬೇಕು. ಎರಡೂ ಅಂಚುಗಳನ್ನು ದೋಸೆ ಚುಂಚಗದಿಂದ ಒತ್ತಬೇಕು. ಎರಡೂ ಮಗ್ಗುಲು ಹೊಂಬಣ್ಣ ಬರುವವರೆಗೆ ಬೇಯಿಸಬೇಕು.
ತುಪ್ಪ ಅಥವಾ ಹಾಲಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
- – ಸಹನಾ ಭಟ್, ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ