Latest

ಪ್ರೀತಿ ಇಲ್ಲದ ಮೇಲೆ…

ಭಾವಾಂತರಂಗ : ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ…?

 

 ಡಾ.ಯಲ್ಲಮ್ಮ.ಕೆ

         ಮಾನವನ ಮನಸ್ಸನ್ನು ಮನವೆಂಬ ಮರ್ಕಟವೆಂದು ಮಂಗನಿಗೆ ಹೋಲಿಕೆಯನ್ನು ನೀಡಲಾಗಿದೆ. ಚಾರ್ಲ್ ಡಾರ್ವಿನ್ ನ ಸಿದ್ಧಾಂತ ಅನ್ವಯ ಮನುಕುಲವು ತನ್ನ ಜೀವವಿಕಾಸದ ಸುದೀರ್ಘ ಕಾಲಾವಧಿಯಲ್ಲಿ ನಾಗರೀಕತೆಯನ್ನು ಮೈಗೂಡಿಸಿಕೊಂಡು ಮಂಗನಿಂದ ಮಾನವನಾದವನು ಎಂದು ಕೇಳಿಕೊಂಡುಬಂದಿರುವುದು ನಿರ್ವಿವಾದದ ಸಂಗತಿ.  ದೇಹ ಮತ್ತು ಬೌದ್ಧಿಕತೆಯಲ್ಲಾದ ಗಣನೀಯ ಬದಲಾವಣೆಗಳೇ ಹೊಸ ಹೊಸ ಆವಿಷ್ಕಾರಗಳಿಗೆ ಮೂಲ ಕಾರಣವೆಂದು ಹೇಳಬಹುದು. ಈ ಮನವೆಂಬ ಮರ್ಕಟವನ್ನು ಕಟ್ಟಿಹಾಕುವುದರೊಂದಿಗೆ ಯುಕ್ತ ರೀತಿ ಬಳಸಿಕೊಳ್ಳುವುದರಲ್ಲಿಯೇ ಬದುಕಿನ ಯಶಸ್ಸು ಅಡಗಿದೆ.

ಮನಸ್ಸನ್ನು ಕಟ್ಟಿಹಾಕುವುದೆಂದರೆ ಹೇಗೆ..? ಭಾವನೆಗಳ ಅಭಾವವು ಬದುಕನ್ನು ಬರಡಾಗಿಸಿಬಿಡುತ್ತದೆ. ಜೀವ -ಭಾವಕ್ಕೆ ಮೂಲ ಸೆಲೆಯು ಪ್ರೀತಿ. ಪ್ರೀತಿ ಎಂದರೆ..? ಪುಳಕ.., ಹಿತಾನುಭವ.., ಅವ್ಯಕ್ತ ಭಾವ.., ಪ್ರೀತಿಯ ಅಭಿವ್ಯಕ್ತಿಯಲ್ಲಿ ಸಹೃದಯಿ – ಕವಿಮನಸ್ಸು ಕೂಡ ಒಮ್ಮೊಮ್ಮೆ ಸೋಲುತ್ತದೆ. ಕಾವ್ಯ ಕಟ್ಟುವುದೆಂದರೆ..? ಅದೊಂದು ತಾದಾತ್ಮ್ಯ ಸ್ಥಿತಿ.

ಅಂತಹ ಸ್ಥಿತಿಯ ಸಿದ್ಧಿಯನ್ನು ಪಡೆದ ಕನ್ನಡದ ಮೂರನೆಯ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ  (ಗುಗ್ಗರಿ ಶಾಂತ ವೀರಪ್ಪ ಶಿವರುದ್ರಪ್ಪ) ನವರು ತಮ್ಮ ಭಾವಗೀತೆಯೊಂದರಲ್ಲಿ  ಪ್ರೀತಿ ಇಲ್ಲದ ಮೇಲೆ – ಹೂವು ಅರಳೀತು ಹೇಗೆ..? ಮೋಡ ಕಟ್ಟೀತು ಹೇಗೆ..? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ..? ಎಂದು ಪ್ರಶ್ನಿಸಿಕೊಳ್ಳುವುದಿದೆಯಲ್ಲ ಅದು ಸಾಮಾನ್ಯ ಸಂಗತಿಯಲ್ಲ.

ಸೃಷ್ಟಿ ಸಹಜ ಪ್ರಕ್ರಿಯೆಯನ್ನು ಕವಿ ಮನಸ್ಸು ಕಂಡಿರುವ ಬಗೆ ಕೂಡ ಇಲ್ಲಿ ವಿಸ್ಮಯ ಎನಿಸುತ್ತದೆ. ಹೂವು ಅರಳುವುದು, ಮೋಡ ಕಟ್ಟುವುದು, ಹನಿಯೊಡೆದು ಕೆಳಗಿಳಿದು ಇಳೆಗೆ ಹಸಿರು ಮೂಡೀತು ಹೇಗೆ..?  ಅಲ್ಲಿ ಪ್ರೀತಿ ಇದೆ, ಅನುರಾಗವಿದೆ ಎಂದು ಯೋಚಿಸುವುದು ಎಂತಹ ರಮ್ಯ ಕಲ್ಪನೆ. ಮೋಡ ಬಿತ್ತನೆ ಮಾಡಿ ಮಳೆ ತರಿಸುವ ಮಾನವನ ಬೌದ್ಧಿಕ ಕುಶಲತೆಗೆ ಈ ಪದಗಳ ಕಂತೆಯಾಗಿ ಗೋಚರಿಸಿದರೂ ತಪ್ಪಿಲ್ಲ ಭಾವದ ಅಭಾವವದು. ಹಾಗೇ ಮುಂದುವರೆದು.., ಮಾತು ಮಾತು ಮತಿಸಿ ಅಮೃತವು ಹೊರ ಸೂಸಬೇಕಲ್ಲದೇ ಹಾಲಾಹಲವು ಉದ್ಭವಿಸದಿರೆ ಏನರ್ಥ..? ಪ್ರೀತಿ ಇಲ್ಲದ ಮೇಲೆ – ಮಾತಿಗೆ ಮಾತು ಕೂಡೀತು ಹೇಗೆ..? ಅರ್ಥ ಹುಟ್ಟೀತು ಹೇಗೆ..? ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ..? ನಿಸ್ವಾರ್ಥ ಪ್ರೀತಿ ಮತ್ತು ನಿರ್ವ್ಯಾಜ್ಯ ಪ್ರೇಮ ಬದುಕಿಗೆ ಬೇಕಲ್ಲವೇ..? ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ.

ಗಾಳಿ, ಬೆಳಕು ಮತ್ತು ಶಬ್ದಗಳಿಗೆ ತಮ್ಮದೇ ಆದ ವೇಗವಿದೆ ಎನ್ನುತ್ತದೆ ವಿಜ್ಞಾನ, ಅವುಗಳನ್ನು ಕ್ರಮವಾಗಿ ಬ್ಯಾರೋಮೀಟರ್, ಸ್ಪೀಡೋಮೀಟರ್, ಡೆಸಿಬಲ್ ಗಳೆಂಬ ಮಾಪನಗಳಿಂದ ಅಳೆಯುತ್ತದೆ ಜ್ಞಾನ. ಈ ಜ್ಞಾನ ಮತ್ತು ವಿಜ್ಞಾನಗಳ ತರ್ಕಕ್ಕೆ – ಅರ್ಥಕ್ಕೆ ನಿಲುಕದ್ದು ಈ ಮಾನವನ ಮನಸ್ಸು. ಮನಸ್ಸಿನ ವೇಗಕ್ಕೆ ಎಣೆಯುಂಟೆ..? ಅದು ಖಂಡಾಂತರ ಪಯಣವನ್ನು ಕ್ಷಣಾರ್ಧದಲ್ಲಿಯೇ ಕ್ರಮಿಸಿಬಿಡುತ್ತದೆ. ಕವಿ ಮನಸ್ಸು ಕೂಡ ಎಲ್ಲಿಂದೆಲ್ಲಿಗೋ ಹಾರಿ ಬಿಡುತ್ತದೆ. ಪ್ರೀತಿ ಇಲ್ಲದ ಮೇಲೆ – ದಕ್ಷಿಣ ಆಫ್ರಿಕದ ಕಗ್ಗತ್ತಲಿಗೆ ಬೆಳಕು ಮೂಡೀತು ಹೇಗೆ..? ಸೆರೆಮನೆಯ ಕಂಬಿಯ ನಡುವೆ ಕಮರುವ ಕನಸು ಕೊನರೀತು ಹೇಗೆ..? ಬಿಳಿ ಜನರ ಕರಾಳ ಕಪ್ಪು ಹೃದಯಕ್ಕೆ ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ..?

1893ರಲ್ಲಿ ಜೋಹಾನ್ಸ್‌ಬರ್ಗ್ ನ ಪ್ರಿಟೋರಿಯಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿಳಿಯನೊಬ್ಬನ ದೂರಿನ ಮೇರೆಗೆ ಕರಿಯನೆಂಬ ಕಾರಣಕ್ಕೆ ಮೋಹನದಾಸ್‌ ಕರಮಚಂದ್‌ ಗಾಂಧಿಯನ್ನು ಅಧಿಕಾರಿಗಳು ರೈಲಿನಿಂದ ಹೊರ ತಳ್ಳಿದ್ದರು.ಇದು ಕಗ್ಗತ್ತಲೆಯ ಖಂಡವಾದ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಮಹಾ ಹೋರಾಟಕ್ಕೆ ನಾಂದಿಯಾಯಿತು. ಮುಂದೆ ಗಾಂಧಿಯ ಪ್ರೇರಣೆ ಮತ್ತು ಪ್ರಭಾವವನ್ನು ಪಡೆದು ಹೋರಾಟವನ್ನು ಆರಂಭಿಸಿ ನೆಲ್ಸನ್ ಮಂಡೇಲಾರವರು ದಕ್ಷಿಣ ಆಫ್ರಿಕಾದ ಗಾಂಧಿ ತಾ ಎನಿಸಿದರು. ಇದೆಲ್ಲ ಆಗಿದ್ದು ಮಾನವೀಯ ಪ್ರೀತಿಯಿಂದಲ್ಲದೆ ಮತ್ತಿನ್ನೇನು?

 

ಪ್ರೀತಿ ಇಲ್ಲದ ಮೇಲೆ – ಸ್ವಾರ್ಥದಿ ಸಂಶಯದ ಗಡಿಗಳುದ್ದಕ್ಕು ದೇಶ-ದೇಶಗಳ ಮಧ್ಯೆ  ಸಿಡಿಮದ್ದುಗುಂಡುಗಳ  ಕದನ ನಿಂತೀತು ಹೇಗೆ..? ಜಾತಿ – ಮತ – ಭಾಷೆ – ಬಣ್ಣಗಳ ಗೋಡೆಯ ನಡುವೆ ನರಳುವ ಪಾಡು ತಪ್ಪೀತು ಹೇಗೆ..? ನಮ್ಮ ನಿಮ್ಮ ಮನಸ್ಸು ಮರುಭೂಮಿಯಾಗದ  ಹಾಗೆ ತಡೆಗಟ್ಟುವುದು ಹೇಗೆ..? ‘ಪ್ರೀತಿ ಇಲ್ಲದ ಮೇಲೆಮತ್ತೇನಿದೆ..? ಜಗತ್ತಿನ ಎಲ್ಲ ಧರ್ಮಗಳ ಸಾರ ಪ್ರೀತಿ. ಪ್ರೀತಿಯನ್ನು ಹಂಚುವುದೇ ಸತ್ಕಾರ್ಯವೆನಿಸುವುದು. ದ್ವೇಷವನ್ನು ಕಾರುವುದು ದುಷ್ಕಾರ್ಯವೆನಿಸದಿರದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button