Kannada NewsKarnataka NewsLatest

ಚನ್ನಮ್ಮ ನಾಡಿನ NPS ವನಿತೆಯರ ವಿಶಿಷ್ಠ ಅಭಿಯಾನ

http://Pragativahini.com

ಎಂ.ಕೆ.ಹೆಗಡೆ, ಬೆಳಗಾವಿ – `ಅಣ್ಣನವರೇ, ನಿಮ್ಮ ಸಹೋದರಿ ಕಳಿಸಿರುವ  ಈ ರಾಖಿಯನ್ನು ಸ್ವೀಕರಿಸಿ, ನಿಮ್ಮ ಸಹೋದರಿಯ ಕುಟುಂಬದ ರಕ್ಷಣೆಯ ಹೊಣೆ ನಿಮ್ಮ ಹೆಗಲಿಗೆ ಇದೆ. ದಯಮಾಡಿ ಎನ್ ಪಿಎಸ್ ರದ್ದುಮಾಡಿ ಓಪಿಎಸ್ ಜಾರಿಮಾಡಿ. ನಿಮ್ಮ ತಂಗಿಯ ಕುಟುಂಬದ ಭವಿಷ್ಯ ಕಾಪಾಡಿ. ಇದೇ ನೀವು ತಂಗಿಗೆ ನೀಡುವ ದೊಡ್ಡ ಕೊಡುಗೆ’

ಬೆಳಗಾವಿ ಜಿಲ್ಲೆಯ ಶಿಕ್ಷಕಿಯರು ಸೇರಿದಂತ ಸರಕಾರಿ ಮಹಿಳಾ ನೌಕರರ ವಿಶಿಷ್ಠ ಅಭಿಯಾನವಿದು. ರಾಜ್ಯ ಸರಕಾರ 2006ರಿಂದ ಜಾರಿಗೆ ತಂದಿರುವ ಎನ್ ಪಿಎಸ್ ಯೋಜನೆ ವಿರುದ್ಧ ಇನ್ನಿಲ್ಲದ ಹೋರಾಟ ಮಾಡಿರುವ ನೌಕರರು ಇದೀಗ ವಿನೂತನವಾದ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಎನ್ ಪಿಎಸ್ ರದ್ದುಗೊಳಿಸಬೇಕು. ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು.  ತನ್ಮೂಲಕ ನೌಕರರ ಕುಟುಂಬದ ಭವಿಷ್ಯ ಕಾಪಾಡಬೇಕು ಎಂದು ಮಹಿಳೆಯರು ಅಭಿಯಾನ ಶುರುಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯಿಂದ ಈ ಅಭಿಯಾನ ಆರಂಭವಾಗಿದ್ದು ಈಗ ಇಡೀ ರಾಜ್ಯಕ್ಕೆ ವಿಸ್ತರಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಿಳೆಯರು ರಾಖಿ ಕಳಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚುತ್ತಿದ್ದಾರೆ.

ಇದರ ಪ್ರತಿಯನ್ನು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಢಕ್ಷರಿ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಸ್ವಾಮಿ ಅವರಿಗೂ ಕಳಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚನ್ನಮ್ಮ ನಾಡಿನ ವೀರ ಎನ್ ಪಿಎಸ್ ವನಿತೆಯರು ಎಂದು ಗ್ರುಪ್ ಮಾಡಿಕೊಂಡು ಈ ಅಭಿಯಾನಕ್ಕೆ ಚಾಲನೆ ನೀಡಿರುವ ಮಹಿಳಾ ನೌಕರರು, ವೇಬಿನಾರ್ ಮೂಲಕ ಚರ್ಚಿಸಿದ್ದಾರೆ.

ರಾಜ್ಯದಲ್ಲಿ ಒಟ್ಟೂ 2.40 ಲಕ್ಷ ಎನ್.ಪಿ.ಎಸ್. ನೌಕರರಿದ್ದಾರೆ. ಅವರಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳಾ ನೌಕರರಿದ್ದಾರೆ. ಬೆಳಗಾವಿಯಲ್ಲಿಯಲ್ಲಿ 15000ಕ್ಕೂ ಹೆಚ್ಚು ಎನ್ ಪಿಎಸ್ ನೌಕರರಿದ್ದು, 8000ಕ್ಕೂ ಹೆಚ್ಚು ಮಹಿಳೆಯರಿದ್ದಾರೆ.

ವಿಶಿಷ್ಠವಾದ ರೀತಿಯಲ್ಲಿ ಪತ್ರ ಬರೆದು ಅದರೊಂದಿಗೆ ರಾಖಿಯನ್ನಿಟ್ಟು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುತ್ತಿದೆ. 15 ದಿನಲ್ಲಿ 50000ಕ್ಕೂ ಹೆಚ್ಚು ರಾಖಿಗಳನ್ನು ಕಳುಹಿಸುವ ಗುರಿ ಹೊಂದಿದ್ದಾರೆ.  ಮಹಿಳೆಯೊಬ್ಬಳು ತನ್ನ ಮಗನಿಗೆ ಪಿಂಚಣಿ ಇಲ್ಲದಿರುವುದರಿಂದ ನೊಂದು ರಾಖಿ ಕಳಿಸುವ ಅಭಿಯಾನ ಮಾಡುವಂತೆ ಸಂದೇಶ ನೀಡಿದರಂತೆ. ಅದನ್ನೇ ಮಹಿಳಾ ನೌಕರರೆಲ್ಲ ಶಿರಸಾವಹಿಸಿ ಆರಂಭಿಸಿದ್ದಾರೆ.
ಸವದತ್ತಿ ತಾಲೂಕಿನ ಮಹಿಳಾ ನೌಕರರು ಈ ಅಭಿಯಾನದ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಇಡೀ ಜಿಲ್ಲೆಯ ನೌಕರರು ಸಾತ್ ನೀಡಿದ್ದಾರೆ. ಪುರುಷ ನೌಕರರೂ ವಿವಿಧ ರೀತಿಯಲ್ಲಿ ಈ ಅಭಿಯಾನಕ್ಕೆ ಮಾರ್ಗದರ್ಶನ, ಸಹಾಯ ನೀಡುತ್ತಿದ್ದಾರೆ.

ಭರವಸೆಗಳೆಲ್ಲ  ಹುಸಿ

 ಎನ್ ಪಿಎಸ್ ಯೋಜನೆ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಹಲವು ರಾಜಕಾರಣಿಗಳು ಭರವಸೆಯ ಮೇಲೆ ಭರವಸೆ ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ತಮ್ಮ ಸರಕಾರ ಬಂದರೆ 24 ಗಂಟೆಯಲ್ಲಿ ಎನ್ ಪಿಎಸ್ ರದ್ದುಮಾಡುವುದಾಗಿ ಚುನಾವಣೆ ಪೂರ್ವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಮರೆತಿದ್ದರು.
ನಂತರದಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಳದ ಅಧಿವೇಶನದಲ್ಲಿ ಕುಮಾರಸ್ವಾಮಿ ಈ ಕುರಿತು ಸಮಿತಿ ರಚಿಸಿದರು. ಸಮಿತಿ ವರದಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಆದರೆ ಅವರ ಸರಕಾರ ಬಿದ್ದು ಹೋಯಿತು. ಸಮಿತಿ ನಿಷ್ಕ್ರೀಯವಾಯಿತು.
ಬಿಜೆಪಿ ಸರಕಾರವೂ ಹಲವು ಬಾರಿ ಭರವಸೆ ನೀಡಿದ್ದರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ರೀತಿಯಲ್ಲಿ ನೌಕರರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸಿಕ್ಕ ಸಿಕ್ಕ ಮಂತ್ರಿಗಳಿಗೆಲ್ಲ ಮನವಿ ಸಲ್ಲಿಸಿದ್ದಾರೆ. ನೌಕರರ ಸಂಘದ ಮೇಲೆ ಒತ್ತಡ ಹೇರಿದ್ದಾರೆ. ನೌಕರರ ಸಂಘದ ಅಧ್ಯಕ್ಷರೂ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಬೇಡಿಕೆ ಮಾತ್ರ ಈಡೇರಲೇ ಇಲ್ಲ.
`ಸವದತ್ತಿ ತಾಲೂಕಿನ ಮಹಿಳೆಯರು ಸಾಮೂಹಿಕ ನಾಯಕತ್ವದೊಂದಿಗೆ ಈ ಅಭಿಯಾನ ಆರಂಭಿಸಿದ್ದಾರೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಮ್ಮ ಬೇಡಿಕೆ ಮುಂದಿಡುವ ಉದ್ದೇಶದೊಂದಿಗೆ, ಲಕ್ಷಾಂತರ ಪತ್ರ ಬರೆಯುವ ಮೂಲಕ ಅಂಚೆ ಇಲಾಖೆಗೂ ನೆರವಾಗಲಿ, ಮಹಿಳೆಯರ ಪತ್ರ ಬರೆಯುವ ಕೌಶಲ್ಯವೂ ಹೊರಬರಲಿ ಎನ್ನುವ ಉದ್ದೇಶ ಇದರ ಹಿಂದಿದೆ. ಸರಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಸವದತ್ತಿ ತಾಲೂಕು ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ಮರಿಗೌಡ ಹೇಳುತ್ತಾರೆ.

`ಬೆಳಗಾವಿ ಜಿಲ್ಲೆಯಲ್ಲಿ 3000 ಶಿಕ್ಷಕಿಯರು ಈ ಅಭಿಯಾನ ಆರಂಭಿಸಿದ್ದಾರೆ. ಪುರುಷ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮಹಿಳೆಯರು ಮನೆಯಲ್ಲಿದ್ದುಕೊಂಡೇ ತಮ್ಮ ಭಾವನೆಯನ್ನು ಹೊರಹಾಕಲು ಈ ಅಭಿಯಾನಮ ಆರಂಭಿಸಲಾಗಿದೆ’ ಎಂದು ಶಿಕ್ಷಕ ಬಿ.ಎನ್.ಮಿಣಕಿ ಹೇಳುತ್ತಾರೆ.

ಒಟ್ಟಾರೆ, ಕಿತ್ತೂರು ಚನ್ನಮ್ಮನ ನಾಡಿನ ವೀರವನಿತೆಯರು ಆರಂಭಿಸಿರುವ ಈ ಭಾವನಾತ್ಮಕ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆಯೋ… ಕಾದು ನೋಡಬೇಕಿದೆ.

ಪ್ರತಿಕ್ರಿಯೆಗಳನ್ನು – [email protected] ಅಥವಾ ವಾಟ್ಸಪ್ – 8197712235 ಗೆ ಕಳಿಸಿ

( ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆಲ್ಲ ಶೇರ್ ಮಾಡಿ)

ನಿಖರ ಮತ್ತು ನಿರಂತರ ಸುದ್ದಿಗಳಿಗಾಗಿ ಪ್ರಗತಿವಾಹಿನಿ ವಾಟ್ಸಪ್ ಗ್ರುಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ –

https://chat.whatsapp.com/G3wOorjsctX5BYRbTscsGu

 

http://Pragativahini.com

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button