ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಅರಭಾವಿ ಮತಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಪಿಎಂಜಿಎಸ್‌ವಾಯ್ ಯೋಜನೆಯಡಿ ೨೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಛೇರಿಯಲ್ಲಿ ಜರುಗಿದ ಮೂಡಲಗಿ ತಾಲೂಕಿನ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಹ ಹಾಗೂ ನಿರಂತರ ಮಳೆಯಿಂದ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿದ್ದು, ಕೂಡಲೇ ಈ ರಸ್ತೆಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು. ಹದಗೆಟ್ಟಿರುವ ರಸ್ತೆಗಳನ್ನು ಸುಧಾರಣೆ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳಲ್ಲಿ ೫೯೦ ಮನೆಗಳು ಹೈಡ್/ಡೆಲಿಟ್ ಆಗಿದ್ದು, ೬೯೩ ಮನೆಗಳು ಡಾಟಾ ಎಂಟ್ರಿ ಪೆಂಡಿಂಗ್ ಇದ್ದು, ಒಟ್ಟು ೧೨೮೩ ಫಲಾನುಭವಿಗಳಿಗೆ ಪರ್ಯಾಯವಾಗಿ ವಸತಿ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಇದರಲ್ಲಿ ೫೯೦ ಮನೆಗಳ ಹೈಡ್/ಡೆಲಿಟ್ ಸೇರಿದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ಚರ್ಚೆ ನಡೆಸಿ, ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ವಿಧವಾ, ಸಂಧ್ಯಾ ಸುರಕ್ಷಾ, ಅಂಗವಿಕಲ ಪಿಂಚಣ ಸೌಲಭ್ಯಗಳು ಸ್ಥಗಿತಗೊಂಡಿದ್ದು, ಫಲಾನುಭವಿಗಳು ಅಲೇದಾಡುತ್ತ ಬೇಸತ್ತಿದ್ದಾರೆ. ಸ್ಥಗಿತಗೊಂಡ ಫಲಾನುಭವಿಗಳಿಗೆ ಕೂಡಲೇ ಪಿಂಚಣ ಸೌಲಭ್ಯ ಒದಗಿಸಬೇಕು. ೨೦೧೯-೨೦ನೇ ಸಾಲಿನಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಪರಿಹಾರ ಇನ್ನೂ ಕೆಲವು ರೈತರಿಗೆ ಸಂದಾಯವಾಗಿಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ೨೦೨೦-೨೧ನೇ ಸಾಲಿನ ಅರಭಾವಿ ಕ್ಷೇತ್ರಾದ್ಯಂತ ಹಾನಿಯಾದ ಬೆಳೆಗಳ ಸಮೀಕ್ಷೆ ಕೈಗೊಂಡು ರೈತರಿಗೆ ಕೂಡಲೇ ಪರಿಹಾರ ಧನ ತಲುಪಿಸುವಂತೆ ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ತೋಟಗಳಲ್ಲಿ ಗುಂಪು ವಾಸಿಸುವ ಜನರಿಗೆ ನಿರಂತರ ಜ್ಯೋತಿ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕು. ಅಕ್ರಮ-ಸಕ್ರಮ ಯೋಜನೆಯಡಿ ಹಣ ತುಂಬಿದ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಗೋಸಬಾಳ ೧೧೦/೧೧ ಕೆವ್ಹಿ ಸ್ಟೇಷನ್ ಕಾಮಗಾರಿಯನ್ನು ಕೂಡಲೇ ಆರಂಭಿಸಲು ಸೂಚಿಸಿದರು.
ತಹಶೀಲ್ದಾರ ದಿಲ್‌ಶಾದ ಮಹಾತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ, ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ವಾಸಂತಿ ತೇರದಾಳ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಬಿಇಓ ಅಜೀತ ಮನ್ನಿಕೇರಿ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ