ಡಿಸಿಸಿ ಬ್ಯಾಂಕ್: ಅಂಜಲಿ ಬೆಂಬಲಿಸಿ 2 ಸ್ಥಾನ ಕಳೆದುಕೊಂಡ್ರಾ ಕತ್ತಿ ಬ್ರದರ್ಸ್?
ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ರಮೇಶ ಕತ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜಕೀಯ ಇನ್ನೂ ಮುಗಿದಿಲ್ಲ, ನಿಜವಾದ ರಾಜಕಾರಣ ಇನ್ನು ಆರಂಭವಾಗಲಿದೆ. Picture Abhi baki hai ಅಂದ ಹಾಗೆ.
ಇದೇ 14ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣ ಆಯೋಗ ನ.15ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿದೆ.
ನಿರ್ದೇಶಕ ಸ್ಥಾನಕ್ಕೆ 13 ಜನರು ಅವಿರೋಧ ಆಯ್ಕೆಯಾದರೆ ಮೂವರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಈ 16 ಜನರು ಸೇರಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.
ಈ ಬಾರಿ ಚುನಾವಣೆ ನಡೆಸದಂತೆ, ಅವಿರೋಧ ಆಯ್ಕೆ ಮಾಡಿಕೊಳ್ಳುವಂತೆ ಆರ್ ಎಸ್ಎಸ್ ಸೂಚನೆ ನೀಡಿತ್ತು. ಅದರಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಪ್ರಯತ್ನ ನಡೆಸಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಖಾನಾಪುರ, ರಾಮದುರ್ಗ ಮತ್ತು ನೇಕಾರರ ವೇದಿಕೆಗೆ ಅವಿರೋಧ ಆಯ್ಕೆ ಸಾಧ್ಯವಾಗಲಿಲ್ಲ. ಈ ಮೂರು ಕ್ಷೇತ್ರಗಳು ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದವು. ಅದರಲ್ಲೂ ಖಾನಾಪುರ ಕ್ಷೇತ್ರದ ಪರಿಣಾಮ ಈಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೂ ಪರಿಣಾಮ ಬೀರುವುದು ನಿಶ್ಚಿತ.
ಏನದು ಪರಿಣಾಮ?
ಖಾನಾಪುರ ಕ್ಷೇತ್ರದಿಂದ ಶಾಸಕಿ ಅಂಜಲಿ ನಿಂಬಾಳಕರ್ ಮತ್ತು ಮಾಜಿ ಶಾಸಕ ಅರವಿಂದ ಪಾಟೀಲ ಸ್ಪರ್ಧಿಸಿದ್ದರು. ಅಂಜಲಿ ನಿಂಬಾಳಕರ್ ಕಾಂಗ್ರೆಸ್ ನವರಾದರೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕತ್ತಿ ಸಹೋದರರ ಬೆಂಬಲ ಪಡೆದಿದ್ದರು. ಅರವಿಂದ ಪಾಟೀಲ ಲಕ್ಷ್ಮಣ ಸವದಿಯ ಶಿಷ್ಯರಾಗಿದ್ದರಿಂದ ಕತ್ತಿ ಸಹೋದರರು ಅವರಿಗೆ ಬೆಂಬಲಿಸಲು ಸಿದ್ಧರಿರಲಿಲ್ಲ.
ಆದರೆ ಬಿಜೆಪಿ ಹೈಕಮಾಂಡ್ ಮತ್ತು ಆರ್ ಎಸ್ಎಸ್ ಕಾಂಗ್ರೆಸ್ ನ ಅಂಜಲಿ ನಿಂಬಾಳಕರ್ ಬೆಂಬಲಿಸುವ ಬದಲು ಅರವಿಂದ ಪಾಟೀಲ್ ಬೆಂಬಲಿಸಿ ಎನ್ನುವ ಸೂಚನೆ ನೀಡಿತ್ತು. ಆದರೆ ಕತ್ತಿ ಸಹೋದರರು ಅಂಜಲಿ ನಿಂಬಾಳಕರ್ ಬೆಂಬಲಿಸಿದರು. ಇದರಿಂದ ಆಕ್ರೋಶಗೊಂಡ ಲಕ್ಷ್ಮಣ ಸವದಿ ಬೆಂಬಲಿಗರು ನೇಕಾರರ ಕ್ಷೇತ್ರದಲ್ಲಿ ಗಜಾನನ ಕ್ವಳ್ಳಿ ಬದಲು ಕೃಷ್ಣಾ ಆನಗೋಳಕರ್ ಬೆಂಬಲಿಸಿದರು. ರಾಮದುರ್ಗ ಕ್ಷೇತ್ರದಲ್ಲಿ ಬೆಳವಣಕಿ ಬದಲು ಡವಣ್ ಅವರನ್ನು ಬೆಂಬಲಿಸಿದರು.
ಖಾನಾಪುರದಲ್ಲಿ ಅರವಿಂದ ಪಾಟೀಲ, ರಾಮದುರ್ಗದಿಂದ ಡವಣ ಮತ್ತು ನೇಕಾರರ ಕ್ಷೇತ್ರದಿಂದ ಕೃಷ್ಣಾ ಆನಗೋಳಕರ್ ಆಯ್ಕಯಾದರು. ಕತ್ತಿ ಸಹೋದರರು ಈಗ ಖಾನಾಪುರ ಮತ್ತು ನೇಕಾರರ ವೇದಿಕೆಯ ನಿರ್ದೇಶಕರ ಬಲ ಕಳೆದುಕೊಂಡರು. ಹಾಗಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಮೇಶ ಕತ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಲಕ್ಷ್ಮಣ ಸವದಿ ಬೆಂಬಲಿಗರ ಸಂಖ್ಯೆಯೇ ದೊಡ್ಡದಾಗಿದೆ.
ಆರ್ ಎಸ್ಎಸ್ ಮಧ್ಯಪ್ರವೇಶ
ಈಗಲೂ ಆರ್ ಎಸ್ಎಸ್ ಮಧ್ಯಪ್ರವೇಶಿಸಿದೆ. ಆರ್ ಎಸ್ ಎಸ್ ಪ್ರಮುಖ ಅರವಿಂದರಾವ್ ದೇಶಪಾಂಡ್ ಬಿಜೆಪಿ ಮುಖಂಡರಿಗೆ ಈಗಾಗಲೆ ಬುಲಾವ್ ನೀಡಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಸೂಚನೆ ನೀಡಲಿದ್ದಾರೆ. ಜೊತೆಗೆ ಇಂತವರನ್ನೇ ಅಧ್ಯಕ್ಷರನ್ನಾಗಿ ಮಾಡುವಂತೆಯೂ ಆದೇಶಿಸುವ ಸಾಧ್ಯತೆ ಇದೆ.
ಖಾನಾಪುರ ವಿಷಯದಲ್ಲಿ ಆರ್ ಎಸ್ಎಸ್ ಮತ್ತು ಹೈಕಮಾಂಡ್ ಆದೇಶ ಪಾಲಿಸದ್ದರಿಂದ ರಮೇಶ ಕತ್ತಿಗೆ ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಕುರಿತು ನಿರ್ಧಾರ ಕೈಗೊಳ್ಳಬಹುದು. ಒಂದೊಮ್ಮೆ ಕತ್ತಿ ಸಹೋದರರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವೂ ಕೈ ತಪ್ಪಿದರೆ ಅವರು ಬಿಜೆಪಿ ವಿರುದ್ಧ ಸಿಡಿದೇಳುವ ಸಾಧ್ಯತೆ ಇದೆ. ಈಗಾಗಲೆ ಸಚಿವಸ್ಥಾನ, ಲೋಕಸಭೆ, ರಾಜ್ಯಸಭೆ ಸ್ಥಾನಗಳನ್ನು ಕಳೆದುಕೊಂಡು ಬಾಲ ತುಳಿದ ಹಾವಿನಂತಾಗಿದ್ದಾರೆ. ಮುಂದಿನ ಪರಿಣಾಮ ಏನಾಗಬಹುದು ಎನ್ನುವ ಕುತೂಹಲ ಮೂಡಿದೆ.
ಬಾಲಚಂದ್ರ ಜಾರಕಿಹೊಳಿಗೆ ಆರ್ ಎಸ್ಎಸ್ ಮತ್ತು ಬಿಜೆಪಿ ಹೈಕಮಾಂಡ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯ ಜವಾಬ್ದಾರಿ ಕೊಡುವ ಸಾಧ್ಯತೆ ಇದೆ. ಬಾಲಚಂದ್ರ ಕಳೆದ 2 -3 ತಿಂಗಳಿನಿಂದಲೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ರಚನೆ ಸಂಬಂಧ ಕಾರ್ಯತತ್ಪರರಾಗಿದ್ದಾರೆ. ಎಲ್ಲರಲ್ಲೂ ಒಮ್ಮತ ಮೂಡಿಸುವ ಕೆಲಸ ಮಾಡಿದ್ದಾರೆ. ಈಗಲೂ ಅವರ ಹೆಗಲಿಗೆ ಜವಾಬ್ದಾರಿ ಬೀಳುವ ಸಾಧ್ಯತೆ ಹೆಚ್ಚು.
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ, ಆದರೆ…. : ರಮೇಶ ಕತ್ತಿ
ಬೆಳಗಾವಿ ಡಿಸಿಸಿ ಬ್ಯಾಂಕ್: ಆಡಳಿತ ಮಂಡಳಿಯ ಸಮಗ್ರ ಪಟ್ಟಿ ಇಲ್ಲಿದೆ
ಡಿಸಿಸಿ ಬ್ಯಾಂಕ್: ಅಂಜಲಿ ನಿಂಬಾಳಕರ್ ಗೆ ಸೋಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ