ಜಯಶ್ರೀ ಜೆ. ಅಬ್ಬಿಗೇರಿ
ದೊಡ್ಡ ಗುಡ್ಡದ ಕೆಳಗೆ ಚಿಕ್ಕದಾದ ಒಂದು ಗುಡಿಸಲಿನಲ್ಲಿ ದಷ್ಟಪುಷ್ಟವಾದ ಎಮ್ಮೆಯೊಂದು ತನ್ನ ಮಾಲಿಕನೊಂದಿಗೆ ಸುಖವಾಗಿ ಕಾಲ ಕಳೆಯುತ್ತಿತ್ತು. ಆ ಎಮ್ಮೆಯ ಬಗೆಗೆ ಮಾಲಿಕನಿಗೆ ವಿಶೇಷ ಹೆಮ್ಮೆ. ತನ್ನ ಹತ್ತಿರವಿರುವ ಎಮ್ಮೆ ಬಲಿಷ್ಟವಾದುದು ಇಂಥ ಎಮ್ಮೆಗಳು ತೀರಾ ವಿರಳ ಎಂಬುದು ಅವನ ಅಭಿಪ್ರಾಯವಾಗಿತ್ತು. ಎಮ್ಮೆಗೂ ತನ್ನ ಮಾಲಿಕನನ್ನು ಕಂಡರೆ ಪ್ರೀತಿ. ಆತ ತುಂಬಾ ಒಳ್ಳೆಯವ, ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಬೀಗುತ್ತಿತ್ತು. ಒಂದು ದಿನ ಮಾಲಿಕ ಗುಡ್ಡವನ್ನೇರಿದ. ನೀಲಿ ಆಗಸ, ಸುಂದರವಾದ ಪ್ರಕೃತಿಯ ಮಡಿಲನ್ನು ನೋಡುತ್ತ ಆನಂದ ತುಂದಿಲನಾದ. ಆಕಸ್ಮಾತ್ತಾಗಿ ಆತನ ದೃಷ್ಟಿ ಗುಡಿಸಲೆದುರಿಗೆ ಕಟ್ಟಿದ ತನ್ನ ಎಮ್ಮೆಯ ಮೇಲೆ ಬಿತ್ತು. ಎತ್ತರದ ಗುಡ್ಡದ ಮೇಲಿಂದ ಎಮ್ಮೆಯನ್ನು ನೋಡಿದ ’ನಾನು ಅತೀವವಾಗಿ ಹೆಮ್ಮೆ ಪಡುವ ನನ್ನ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಯಲ್ಲ!’ ಎಂದು ಉದ್ಗರಿಸಿದ. ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಕೆಳಗಿದ್ದ ಎಮ್ಮೆಯೂ ತನ್ನ ಮಾಲಿಕನನ್ನು ನೋಡಿತು. ನನ್ನ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾನಲ್ಲ! ಎಂದು ಅಚ್ಚರಿಗೊಂಡಿತು. ಮಾಲಿಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು. ಎಮ್ಮೆ ದೃಷ್ಟಿಯಲ್ಲಿ ಮಾಲಿಕ ಚಿಕ್ಕವ! ನಿಜವಾಗಿ ಇಬ್ಬರೂ ಚಿಕ್ಕವರಿಲ್ಲ. ಅದೆಲ್ಲ ಸಾಪೇಕ್ಷಕ. ಎಂಬುದನ್ನು ನಾನು ಎಲ್ಲೋ ಓದಿದ, ನನ್ನ ಮನಃಪಟಲದಲ್ಲಿ ಉಳಿದ ಈ ಕಥೆಯು ಸಾರಿ ಹೇಳುತ್ತದೆ. ನಮ್ಮ ನಕಾರಾತ್ಮಕ ದೃಷ್ಟಿ ಕೋನ . ಶ್ರೇಷ್ಠ ಗುಣವನ್ನು ಒಪ್ಪಿಕೊಳ್ಳದೇ ಕತ್ತಲು ಕೋನವನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಅದುವೇ ಕಷ್ಟದ ಇಲ್ಲವೇ ದುಃಖದ ಮನಸ್ಥಿತಿಗೆ ಕಾರಣವಾಗುತ್ತದೆ.
ಭರವಸೆಯ ಬೆಳ್ಳಿ ಕಿರಣ
ಬದುಕಿನ ಚಿತ್ರವೇ ವಿಚಿತ್ರವಾಗಿದೆ. ಇನ್ನೇನು ಅದರ ರೂಪು ರೇಷೆಗಳು ತಿಳಿಯುತ್ತಿವೆ ಎನ್ನುವಷ್ಟರಲ್ಲಿ ಅದರ ಚಿತ್ರವೇ ಬದಲಾಗಿ ಬಿಡುತ್ತದೆ. ಅದರಲ್ಲೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಾಗಲಂತೂ ಕೇಳುವುದೇ ಬೇಡ. ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಅಂದ್ರೆ ಬರೀ ನೋವಿನ ಸಾಗರವೇನೋ ಎಂದು ಗೋಳಿಡುತ್ತವೆ. ಹೀಗೆ ಕಣ್ಣೀರಿಡುವಾಗಲೇ ಕಾರ್ಗತ್ತಲ್ಲಲ್ಲಿ ಭರವಸೆಯ ಬೆಳ್ಳಿ ಕಿರಣವೊಂದು ಮೂಡುವುದು ವಿಚಿತ್ರವೇ ಸರಿ. ವಿಚಿತ್ರವಾದರೂ ಅದು ಸತ್ಯ. ’ಒಂದು ರೂಪಾಯಿಯ ಬೆಲೆ ಏನೆಂದು ತಿಳಿಯಬೇಕಿದ್ದರೆ ಸಾಲ ಪಡೆಯಿರಿ.’ ಎನ್ನುತ್ತಾರೆ ಹಿರಿಯರು. ಸುಖ ಸಂತಸದ ಬೆಲೆ ಏನೆಂದು ತಿಳಿಯಬೇಕೆಂದರೆ ಧುತ್ತನೇ ಧುಮುಕಿ ಬರುವ ಕಷ್ಟಗಳ ಓಣಿಯಿಂದ ಹಾದು ಬರಬೇಕು. ಆಗಲೇ ಗೊತ್ತಾಗುವುದು ಥರಾವರಿ ಬಣ್ಣ ಬಳಿದುಕೊಂಡ ಸುಖದ ಬದುಕಿನ ಬಣ್ಣ. ಅಸಾಧ್ಯವೂ ಸಾಧ್ಯವಾಗುತ್ತದೆ. ಜೀವನದ ಹೋರಾಟದಲ್ಲಿ ಕನಸುಗಳು ನನಸಾಗುತ್ತವೆ. ಶಕ್ತಿವಂತರಿಗೆ ಅಥವಾ ವೇಗವಾಗಿ ಚಲಿಸುವವರಿಗೆ ಮಾತ್ರವಲ್ಲ ಕಷ್ಟಗಳೊಂದಿಗೆ ಸತತ ಹೋರಾಟ ನಡೆಸುವವರೆಗೂ ಎನ್ನುತ್ತಾರೆ ಪ್ರಾಜ್ಞರು.
ನಾನೆಲ್ಲ ಬಲ್ಲೆ
ನಮಗೆಲ್ಲ ಗೊತ್ತಿರುವಂತೆ ಕಷ್ಟದಲ್ಲಿ ಭಾವಪರವಶತೆ ಭಾವತೀವ್ರತೆ ಅತಿ ಎನಿಸುವಷ್ಟು ಕಂಡು ಬರುತ್ತದೆ. ಖಾಸಗಿ ಬದುಕಿನ ದುಃಖವನ್ನು ಇತರರ ಮುಂದಿಟ್ಟು ಗಳಗಳನೆ ಅಳುವುದು ಸರಿಯಲ್ಲ.ಅದು ಪ್ರತಿಷ್ಠೆಯ ವಿಷಯವೂ ಕೂಡ. ಹೀಗಾಗಿ ದುಃಖದ ಗೊಂಬೆ ಮನಸ್ಸಿನಲ್ಲಿ ಕರಗದ ಹಿಮದ ಗಡ್ಡೆಯಂತೆ ಕೂತು ಬಿಡುತ್ತದೆ. ತಪ್ಪು ಹೆಜ್ಜೆ ಇಟ್ಟಾಗೊಮ್ಮೆ ಬದುಕು ಕಷ್ಟವೆಂಬ ಬಾರುಕೋಲಿನಲ್ಲಿ ಬಾರಿಸುತ್ತದೆ.ಇದರಿಂದಾಗಿ ತಂಪಾದ ಹಾಯಾದ ಸಂತಸದ ಮುಸ್ಸಂಜೆಯಲ್ಲೂ ಬದುಕಿನ ಪ್ರತಿ ಮುಖ ಕೆಂಪಗಾಗಿರುತ್ತದೆ. ಅದೂ ಅಲ್ಲದೇ ನಮ್ಮೆಲ್ಲ ಕಷ್ಟಗಳಿಗೆ ಕಾರಣ ಸುಖದ ಅಭಾವದ ಮನಸ್ಥಿತಿ. ಬಾಹ್ಯ ಸಲಕರಣೆ ಸಾಧನ ಸೌಕರ್ಯಗಳಲ್ಲಿ ಸುಖ ಅಡಗಿದೆ ಎಂದು ತಿಳಿದಿರುವುದು. ಕಷ್ಟಗಳಿಗೆ ಕಾರಣವನ್ನು ಇನ್ನೂ ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ ’ನಮ್ಮಲ್ಲಿ ಶಕ್ತಿ ಇಲ್ಲದೇ ಇರುವುದಲ್ಲ. ನಮ್ಮ ಶಕ್ತಿಯನ್ನು ನಾವು ಗರುತಿಸಲಾರದೇ ಹೋಗುವುದು.’ ಸಮಸ್ಯೆಗಳು ನಮ್ಮಲ್ಲಿಯ ಅಂತರ್ಗತ ಶಕ್ತಿಯನ್ನು ಹೊರಗೆ ತರುತ್ತವೆ. ’ನಾನೆಲ್ಲ ಬಲ್ಲೆ’ ಎಂದು ಮರದಂತೆ ಆಕಾಶಕ್ಕೆ ಮುಖ ಮಾಡಿ ನಿಂತರೆ ಚಂಡಮಾರುತಕ್ಕೆ ಬೇರು ಸಮೇತ ಉರುಳಿ ಹೋಗುವೆವು. ಅದೇ ಹುಲ್ಲಿನಂತಿದ್ದರೆ ಯಾವ ಭೀಕರ ಬಿರುಗಾಳಿಗಳು ನಮ್ಮನ್ನು ಬುಡ ಸಮೇತ ಕಿತ್ತೊಗೆಯಲಾರವು ಎಂಬುದು ನಿತ್ಯ ಸತ್ಯ. ಸಾಗುವ ದಾರಿಯನ್ನು ಮರೆತು ಅಬ್ಬೆಪಾರಿಯಂತೆ ಅಲೆಯುತ್ತಿದ್ದರೆ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಕಸದಂತೆ ಕಷ್ಟಗಳು ಕೊಚ್ಚಿ ಹೋಗುವುದಿಲ್ಲ. ಮಳೆಗಾಲದಲ್ಲಿ ಬೆಳೆವ ಕಸದಂತೆ ಬೆಳೆಯುತ್ತವೆ.
ಹೂವು ನೋಡೋಣ ಮುಳ್ಳನ್ನಲ್ಲ!
’ಅಬಾಲ ವೃದ್ದರನ್ನು ಆಕರ್ಷಿಸುವ ಚಿಟ್ಟೆಯು ತಿಂಗಳು ವರುಷಗಳವರೆಗೆ ಬದುಕುವುದಿಲ್ಲ. ಅದು ಕೇವಲ ಕೆಲ ಗಂಟೆಗಳವರೆಗೆ ದಿನಗಳವರೆಗೆ ಮಾತ್ರ ಬದುಕುತ್ತದೆ. ಆದರೂ ಅದು ತನ್ನ ಜೀವನವನ್ನು ಸುಂದರಗೊಳಿಸುತ್ತದೆ. ಮನುಷ್ಯರಾದ ನಾವು ತಾಸಲ್ಲ ದಿನವಲ್ಲ ತಿಂಗಳುಗಳಲ್ಲ ವರುಷಗಳವರೆಗೆ ಬದುಕುತ್ತೇವೆ. ಆದರೆ ನಾವು ನಮ್ಮ ಜೀವನವನ್ನು ಸವಿಗೊಳಿಸುವುದೇ ಇಲ್ಲ. ಅದರ ಬದಲು ಕಷ್ಟಗಳತ್ತ ಬೊಟ್ಟು ಮಾಡಿ ಹುಳಿಗೊಳಿಸುತ್ತೇವೆ.’ಎಂದಿದ್ದಾರೆ ಮಹಾಕವಿ ರವೀಂದ್ರರು. ಚಿಟ್ಟೆ ಕಣ್ಣು ಬಿಟ್ಟು ನೋಡಿದ್ದು ಸುಂದರ ಹೂವನ್ನೇ ಹೊರತು ಹೂವಿನ ಕೆಳಗಿರುವ ಕೆಸರನ್ನೂ ಅಲ್ಲ ಮುಳ್ಳನ್ನೂ ಅಲ್ಲ. ಮಕರಂದದ ಗೆಳೆತನ ಮಾಡಿ ಅಲ್ಪಾವಧಿ ಬದುಕಿದರೂ ಅದರ ಜೀವನ ನಂದನವನವಾಯಿತು.’ಒಳ್ಳೆಯ ಜನರು ಸದಾ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.’ ಎಂದಿದ್ದಾನೆ ಕನ್‌ಫ್ಯೂಶಿಯಸ್ ಕಷ್ಟಗಳು ಎಷ್ಟೇ ಇದ್ದರೂ ನಮ್ಮ ಧ್ಯೇಯವನ್ನು ನಿರ್ಧಿಷ್ಟವಾಗಿ ಆರಿಸಿಕೊಂಡು ಅದರ ಬೆನ್ನು ಹತ್ತಬೇಕು. ಪ್ರತಿಯೊಂದು ಘಟನೆಯಲ್ಲೂ ಒಳ್ಳೆಯದರತ್ತ ದೃಷ್ಟಿ ಹರಿಸಬೇಕು ಹೂವಿನಂಥ ಸುಖ ನೋಡಬೇಕೇ ಹೊರತು ಮುಳ್ಳಿನಂಥ ದುಃಖದತ್ತ ಚಿತ್ತ ಹರಿಸಬಾರದು. ಆಗ ನಮ್ಮ ಆಲಸ್ಯತನಕ್ಕೆ ನಕಾರಾತ್ಮಕ ದೃಷ್ಟಿಕೋನಕ್ಕೆ ಬೇರು ಬಿಟ್ಟಿದ್ದ ಕಷ್ಟದ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ಮುಂದಿನ ಮುಂಜಾವುಗಳಲ್ಲಿ ಸುಖದ ಸೂರ್ಯ ಪೂರ್ವ ದಿಗಂತದಲ್ಲಿ ನರ್ತಿಸುತ್ತಾನೆ. ಕಷ್ಟದ ಬೆಟ್ಟದ ತಪ್ಪಲಲ್ಲಿ ಹಿಂದೆ ಬರುವ ಪಥಿಕರಿಗೂ ಸಂತಸದ ದಾರಿ ಸೃಷ್ಟಿಸಬಹುದು ಅಲ್ಲವೇ?
(ಲೇಖಕರು – ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ಮೊ. ೯೪೪೯೨೩೪೧೪೨)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ