ಪ್ರಗತಿವಾಹಿನಿ ಸುದ್ದಿ; ರಾಯಬಾಗ: ರಾಯಬಾಗ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಕಟ್ಟಡ ಸಾಕಷ್ಟು ವಿಶಾಲವಾಗಿದೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಆದರೆ ಇದಕ್ಕೆ ತಕ್ಕಂತೆ ಇಲ್ಲಿ ಆರೋಗ್ಯ ಸೇವೆ ದೊರೆಯುತ್ತಿಲ್ಲಾ.
ಸರ್ಕಾರಿ ಆಸ್ಪತ್ರೆ ಎಂದರೆ ರೋಗಿಗಳಿಗೆ ಆರೋಗ್ಯ ರಕ್ಷಣೆ, ಚಿಕಿತ್ಸೆ ಒದಗಿಸುವ ತಾಣವಾಗಿರುತ್ತದೆ ರಾಯಬಾಗ ಪಟ್ಟಣದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದ್ದು, ಪಟ್ಟಣದ ಜನತೆಯೊಂದಿಗೆ ಸುತ್ತಮುತ್ತಲಿನ ತಾಲ್ಲೂಕಿನ ಜನರು ಕೂಡಾ ಇಲ್ಲಿ ಚಿಕಿತ್ಸೆಗೆಂದು ಬರುತ್ತಾರೆ. ಚಿಕಿತ್ಸಾ ಸೌಲಭ್ಯಗಳಿಲ್ಲದೆ ಹಾಗೂ ಸಮರ್ಪಕವಾಗಿ ವೈದ್ಯರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದ ಪರಿಣಾಮ ರಾಯಬಾಗ ಪಟ್ಟಣದಿಂದ ರೋಗಿಗಳು ಚಿಕಿತ್ಸೆಗಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಮಿರಜ, ಕೊಲ್ಲಾಪುರ, ಇಂಚಲ್ಕರಂಜಿ ,ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಹೋಗುವ ಅನಿವಾರ್ಯತೆ ರೋಗಿಗಳಿಗೆ ಬಂದೊದಗಿದೆ. ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅವಶ್ಯವಿರುವ ರೋಗಿಗಳಿಗೆ ಆ ದೇವರೆ ಕಾಪಾಡಬೇಕಾಗಿದೆ.
ರಾಯಬಾಗ ಪಟ್ಟಣದ ಹೊಸದಿಗಂತ ಹಾಗೂ ಪ್ರಜಾವಾಹಿನಿ ಪತ್ರಿಕೆಯ ವರದಿಗಾರ, ಆದರ್ಶ ಪೈನಾನ್ಸನ ಅಧ್ಯಕ್ಷರಾಗಿದ್ದ ಲಕ್ಕನ ಕಟ್ಟಿಕಾರ ಇವರಿಗೆ ನಿನ್ನೆ ರಾತ್ರಿ ಹನ್ನೊಂದು ಗಂಟೆಗೆ ಮನೆಯಲ್ಲಿ ಲಘು ಹೃದಯಾಘಾತವಾಗಿದೆ. ರಾಯಬಾಗ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸಾ ಸೌಲಭ್ಯ, ಸಮರ್ಪಕ ವೈದ್ಯರಿಲ್ಲದ ಕಾರಣ ತಾಲ್ಲೂಕಿನ ಸುಮಾರು 12 ಕಿಲೋಮೀಟರ ದೂರವಿರುವ ಹಾರೊಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕುಟುಂಬದವರು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಲಕ್ಕನ ಕಟ್ಟಿಕಾರ ಸಾವನ್ನಪ್ಪಿದ್ದಾರೆ.
ಪತ್ರಕರ್ತ ಲಕ್ಕನ ಕಟ್ಟಿಕಾರ 1995ರಲ್ಲಿ ಪತ್ರಿಕಾ ವರದಿಗಾರರಾಗಿ ರಾಯಬಾಗ ತಾಲ್ಲೂಕಿನಲ್ಲಿಯೆ ಪತ್ರಕರ್ತರಾಗಿ ತಮ್ಮದೇ ಆದಂತಹ ಹೆಸರನ್ನು ಗಳಿಸಿದ್ದರು. ಯಾವುದೇ ವಿಶ್ವವಿದ್ಯಾನಿಲಯಗಳ ಪದವಿಗಳು ಇರದಿದ್ದರೂ ಸಹ ಇವರು ಮೇಧಾವಿಯಾಗಿದ್ದರು ತಾಲೂಕಿನಲ್ಲಿ ಸುಮಾರು ಯುವ ಪತ್ರಕರ್ತರನ್ನು ಬೆಳೆಸಿದರು, ಹಲವು ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಇಬ್ಬರು ಪುತ್ರಿಯರು, ಇಬ್ಬರುತಮ್ಮಂದಿರು, ತಾಯಿಯನ್ನು ಅಗಲಿದ್ದಾರೆ.
ರಾಯಬಾಗದ ಪ್ರಜಾವಾಣಿ ದಿನಪತ್ರಿಕೆಯ ತಾಲೂಕಾ ವರದಿಗಾರರಾಗಿದ್ದ ಮಲ್ಲಪ್ಪಾ ರಾಮದುರ್ಗ ಸಾವಿನ ಬೆನ್ನಲ್ಲೆ ಮತ್ತೊರ್ವ ಲೇಖಕ, ಪತ್ರಕರ್ತರನ್ನು ಅದು ರಾಷ್ಟ್ರೀಯ ಪತ್ರಕರ್ತರ ದಿನದಂದು ರಾಯಬಾಗ ಪತ್ರಕರ್ತರು ಕಳೆದುಕೊಂಡು ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ. ಇನ್ನಾದರೂ ಸ್ಥಳಿಯ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಈ ಕೂಡಲೇ ರಾಯಬಾಗ ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಸೌಲಭ್ಯಗಳನ್ನು, ವೈದ್ಯರನ್ನು ಒದಗಿಸಿಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ