5 ಸಾವಿರ ಕೋಟಿ ರೂ ಕಾಮಗಾರಿಗಳಿಗೆ ಹುಬ್ಬಳ್ಳಿಯಲ್ಲಿ ಪ್ರಧಾನಿ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ
ಕರ್ನಾಟಕ ಸರಕಾರದ ನಾಯಕರು ತಮ್ಮ ತಮ್ಮ ಖುರ್ಚಿ ಭದ್ರಪಡಿಸಿಕೊಳ್ಳುವುದರಲ್ಲೇ ಕಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳ ಖುರ್ಚಿಯನ್ನು ಕಾಂಗ್ರೆಸ್ ನಿರಂತರವಾಗಿ ಅಲುಗಾಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಕೇಂದ್ರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಹುಬ್ಬಳ್ಳಿಯ ಕೆಎಲ್ಇ ಮೈದಾನದಲ್ಲಿ ಭಾನುವಾರ ಸಂಜೆ ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಖುರ್ಚಿ ಉಳಿಸಿಕೊಳ್ಳುವುದಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಸಾಲಮನ್ನಾ ಎನ್ನುವುದು ಮಹಾಪ್ರಹಸನವಾಗಿದೆ. ಜನರಿಗೆ ಪ್ರಬಲ ಸರಕಾರ ಬೇಕಾಗಿದೆ. ಮೋದಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ಭ್ರಷ್ಟರಿಗೆ ಮೋದ ಎಂದರೆ ಕಷ್ಟ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ತಂದಿರುವ ಯೋಜನೆಗಳನ್ನು ವಿವರಿಸಿದ ಪ್ರಧಾನಿ, 73 ಸಾವಿರ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವೆಲ್ಲ ಜನರ ಜೀವನ ಸುಧಾರಣೆಗೆ ಅವಕಾಶ ಮಾಡಿಕೊಡುತ್ತದೆ ಎಂದು.
ಐಐಟಿ, ಐಐಐಟಿ, ರೈಲ್ವೆ ಮಾರ್ಗ, ಗ್ಯಾಸ್ ಸಂಪರ್ಕ ಮೊದಲಾದ 5 ಸಾವಿರ ಕೋಟ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಮಾಡಿಕೊಡಲಿದೆ. ಜಾಗತಿಕ ಮಟ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಮತ್ತು ಈ ಭಾಗವನ್ನು ಸ್ಪರ್ಧೆಗೆ ಸಜ್ಜಾಗುವಂತೆ ಮಾಡಲಿದೆ ಎಂದು ಅವರು ಹೇಳಿದರು.
ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಮೊದಲಾದ ವೀರರಿಗೆ ಜನ್ಮ ನೀಡಿದ ನಾಡಿದು ಎಂದ ಮೋದಿ, ದಿ.ಅನಂತಕುಮಾರ ಅವರನ್ನು ಸ್ಮರಿಸಿದರು. ಈ ವೀರರ ನಾಡಿನಲ್ಲಿ ನಿಂತಿರುವುದು ನನಗೆ ರೋಮಾಂಚನವನ್ನುಂಟು ಮಾಡಿದೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.
ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಚಿಕ್ಕ ಭಾಷಣ ಮಾಡುವ ಮೂಲಕ ಸೇರಿದ್ದ ಲಕ್ಷಾಂತರ ಜನರನ್ನು ನಿರಾಸೆಗೊಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ ಹೆಗಡೆ, ರಮೇಶ ಜಿಗಜಿಣಗಿ, ಸಂಸದರಾದ ಪ್ರಭಾಕರ ಕೋರೆ, ಪ್ರಹಲ್ಲಾದ ಜೋಶಿ, ಸುರೇಶ ಅಂಗಡಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರೆಲ್ಲ ಸೇರಿದ್ದರು.