ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಗಂದಿಗವಾಡ ಗ್ರಾಮದ ಬಳಿ ಗ್ರಾಮದ ರೈತರಿಗೆ ಸೇರಿದ ಕಬ್ಬಿನ ಗದ್ದೆಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಕಬ್ಬು ಸುಟ್ಟು ಭಸ್ಮವಾದ ಘಟನೆ ಶನಿವಾರ ವರದಿಯಾಗಿದೆ.
ಗ್ರಾಮದ ರೈತರಾದ ಬಸವರಾಜ ಹಿಟ್ಟೀನ, ರಾಮಾ ನಾಯಕರ, ಬಸಪ್ಪ ಅಂಬಡಗಟ್ಟಿ, ಪಾರೀಶ ಮಂಡೇದ ಹಾಗೂ ಇತರೆ ರೈತರ ಅಂದಾಜು ೨೦೦೦ ಟನ್‌ನಷ್ಟು ಕಟಾವಿಗೆ ಬಂದಿದ್ದ ಕಬ್ಬು ವಿದ್ಯುತ್ ಅವಘಡದಿಂದಾಗಿ ಹೊರಹೊಮ್ಮಿದ ಕಿಡಿಯಿಂದ ಸುಟ್ಟಿದೆ.
ಘಟನಾ ಸ್ಥಳಕ್ಕೆ ಎಂ.ಕೆ ಹುಬ್ಬಳ್ಳಿಯ ರಾಣಿ ಶುಗರ್ಸ್ ಅಧ್ಯಕ್ಷ ನಾಸೀರ ಬಾಗವಾನ, ನಿರ್ದೇಶಕ ಅಶೋಕ ಯಮಕನಮರಡಿ ಭೇಟಿ ನೀಡಿ ಕೂಡಲೇ ಉಳಿದ ಕಬ್ಬನ್ನು ತಮ್ಮ ಕಾರ್ಖಾನೆಗೆ ಸಾಗಿಸಿ ನುರಿಸುವುದಾಗಿ ಮತ್ತು ಆಕಸ್ಮಿಕ ಘಟನೆಯಿಂದಾಗಿ ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ ಮತ್ತು ತಮ್ಮ ಕಾರ್ಖಾನೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಹೇಳುವ ಮೂಲಕ ನೊಂದ ರೈತರಿಗೆ ಧೈರ್ಯ ತುಂಬಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ