ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಎರಡನೆಯ ದಿನದ ಉಪವಾಸ ಸತ್ಯಾಗ್ರಹದಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ನೂರಾರು ಜನ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಭಾಗಿಯಾದರು.
ಎರಡನೆಯ ದಿನ ಉಪವಾಸ ಸತ್ಯಾಗ್ರಹದಲ್ಲಿ ಮುಂಡರಗಿಯ ಶ್ರೀಮನ್ನಿರಂಜನ ಅನ್ನದಾನೇಶ್ವರ ಮಹಾಸ್ವಾಮಿಗಳು ಭಾಗವಹಿಸಿ ಬೆಂಬಲವನ್ನು ನೀಡಿದರು. ಶಿಕ್ಷಕರ ಬೆನ್ನೆಲುಬಾಗಿರುವಂತಹ ಹೊರಟ್ಟಿಯವರಿಗೆ ಯಶಸ್ವಿಯಾಗಲೆಂದು ಹಾರೈಸಿದರು.
ಶ್ರೀ ಮನ್ನಿರಂಜನ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಶಾಖಾಮಠ ಮುಂಡರಗಿಯವರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ನೀಡಿದರು. ಶಿಕ್ಷಕರ ಕುಂದು ಕೊರತೆಗಳ ಬಗ್ಗೆ ಬೆಳಕು ಚೆಲ್ಲಿದರು ಹಾಗೂ ಹೊರಟ್ಟಿಯವರ ಹೋರಾಟದ ಜೀವನದ ಬಗ್ಗೆ ಮಾತನಾಡಿದರು. ಅನುದಾನ ರಹಿತ ಕನ್ನಡ ಶಾಲಾ ಶಿಕ್ಷಕರ ನೋವಿನ ಜೀವನದ ಬಗ್ಗೆ ಸರಕಾರದ ಗಮನ ಸೆಳೆದರು.
ನಾಡಿನ ವಿವಿಧ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘಕ್ಕೆ ಹಾಗೂ ಸನ್ಮಾನ್ಯ ಬಸವರಾಜ ಹೊರಟ್ಟಿಯವರ ಹೋರಾಟಕ್ಕೆ ಬೆಂಬಲ ನೀಡಿದರು.
ಈ ದೇಶದಲ್ಲಿ ರೈತರಿಗೆ ಹಾಗೂ ಶಿಕ್ಷಕರಿಗೆ ಸರ್ಕಾರ ಸರಿಯಾದ ಅನುದಾನ ನೀಡಬೇಕು ಎಂದು ನಿಜಗುಣ ತೋಂಟದಾರ್ಯ ಸ್ವಾಮಿಗಳು ಹೇಳಿದರು.
ಎನ್.ಎಚ್.ಕೋನರೆಡ್ಡಿ, ಗುರುರಾಜ ಹುಣಸೀಮರದ, ವಸಂತ ಹೊರಟ್ಟಿ, ಜಿ.ಆರ್.ಭಟ್, ಶ್ಯಾಮ ಮಲ್ಲನಗೌಡರ, ಸುಭಾಸ ನಾಟೇಕರ, ಎಚ್.ಪಿ.ಬಣಕಾರ, ಎನ್.ಎನ್.ಸವಣೂರ, ಎನ್.ಎಸ್.ಗೋವಿಂದರೆಡ್ಡಿ, ವ್ಹಿ.ಎಸ್.ಹುದ್ದಾರ, ಆಯ್.ಮುಲ್ಲಾ ಹಾಗೂ ಸಾವಿರಾರು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಭಾಗವಹಿಸಿದ್ದರು.
ಬಸವರಾಜ ಹೊರಟ್ಟಿ ಮಾತನಾಡಿದ ಅಂಶಗಳು:
ಶಿಕ್ಷಣ ಸಚಿವರು ಸಭೆ ಕರೆದು ಮಾತನಾಡುತ್ತೇನೆಂದು ಹೇಳಿದ್ದಾರೆ. ನಾಲ್ಕು ದಿನ ಸುಮಯ ತೆಗೆದುಕೊಂಡು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೇಳಿದ್ದೇನೆ ಎಂದು ಹೇಳಿದರು.
೧೯೯೫ ರ ನಂತರ ಆರಂಭವಾದ ಶಾಲೆಗಳ ಶಿಕ್ಷಕರು ಅನುದಾನಕ್ಕೆ ಒಳಪಡುವವರೆಗೂ ಹೋರಾಟ ನಿಲ್ಲದು.
ದಿನಾಂಕ: ೦೧-೦೪-೨೦೦೬ ರ ನಂತರ ಸೇವೆಗೆ ಸೇರಿದ ಅನುದಾನಿತ ನೌಕರರಿಗೆ ಸರ್ಕಾರಿ ನೌಕರರಿಗಿರುವಂತೆ ಶೇಕಡಾ ೧೦ ರಷ್ಟು ವಂತಿಗೆಯನ್ನು ಸರ್ಕಾರವೇ ತುಂಬಬೇಕು. (ಸರ್ಕಾರಿ ನೌಕರರಿಗೆ ಸರ್ಕಾರವೇ ಶೇಕಡ ೧೦ ರಷ್ಟು ವಂತಿಗೆ ನೀಡುವಂತೆ, ಅನುದಾನಿತ ನೌಕರರಿಗೂ ಸರಕಾರವೇ ತುಂಬಬೇಕು).
ಆರ್ಥಿಕ ಮಿತವ್ಯಯ ಸಡಿಲಿಸಬೇಕು.
ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ