Latest

ಸಮ್ಮೇಳನಾಧ್ಯಕ್ಷರಾಗಿ ಡಾ. ವಸುಂಧರಾ ಭೂಪತಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ  : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಕೇಂದ್ರ ಸಮಿತಿಯು ಬಳ್ಳಾರಿ ಜಿಲ್ಲಾ ಘಟಕದ ಸಹಕಾರದಲ್ಲಿ ೨೦೨೧ ಮಾರ್ಚ್ ಮಾಹೆಯಲ್ಲಿ ಹಮ್ಮಿಕೊಳ್ಳಲಿರುವ ಅಖಿಲ ಕರ್ನಾಟಕ ತೃತೀಯ ಕವಿ-ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಹಿರಿಯ ಸಾಹಿತಿ ಡಾ. ವಸುಂಧರಾ ಭೂಪತಿಯವರು ಸರ್ವಾನುಪತದಿಂದ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ತಿಳಿಸಿದ್ದಾರೆ.
ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮ್ಮೇಳನದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ರಾಜ್ಯಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲಾಧ್ಯಕ್ಷರುಗಳ ಸಮ್ಮುಖದಲ್ಲಿ ಚರ್ಚಿಸಲಾಗಿ ಸಮ್ಮೇಳನದ ಸರ್ವಾಧ್ಯಕ್ಷತೆಗೆ ನಾಡಿನ ಪ್ರಸಿದ್ಧ ಸಾಹಿತಿಗಳಾದ ಡಾ. ವಿನಯಾ ಒಕ್ಕುಂದ, ಡಾ. ಮಲ್ಲಿಕಾ ಘಂಟಿ ಹಾಗೂ ಡಾ. ವಸುಂಧರಾ ಭೂಪತಿ ಅವರ ಹೆಸರುಗಳು ಪ್ರಸ್ತಾಪವಾದರೂ ಅಂತಿಮವಾಗಿ ಬಹುಮತದ ನಿರ್ಣಯದಂತೆ ಡಾ. ವಸುಂಧರಾ ಭೂಪತಿಯವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಮ್ಮೇಳನವನ್ನು ೨೦೨೧ ರ ಮಾರ್ಚ್ ಮಾಹೆಯಲ್ಲಿ ಪ್ರಸಿದ್ದ ಪ್ರವಾಸಿ ತಾಣವಾದ ಹಂಪಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯ ಕಾರ್ಯದರ್ಶಿ ಪಿ.ದಿವಾಕರ ನಾರಾಯಣ ಮಾತನಾಡಿ, ನಮ್ಮ ಸಾಹಿತ್ಯ ವೇದಿಕೆಯು ಈಗಾಗಲೇ ೨೦೧೯ ರಲ್ಲಿ ಸಕಲೇಶಪುರದಲ್ಲಿ ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನವನ್ನು ಹಾಗೂ ೨೦೨೦ ರಲ್ಲಿ ಬೀದರ ನಗರದಲ್ಲಿ ಹಿರಿಯ ಸಾಹಿತಿ ಡಾ. ಎಂ.ಜಿ.ದೇಶಪಾಂಡೆಯವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ದ್ವಿತೀಯ ಕವಿ-ಕಾವ್ಯ ಸಮ್ಮೇಳವನ್ನು ಹಾಗೂ ಹಲವಾರು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡು ಯಶಕಂಡಿದೆ. ಇಂದು ಪ್ರಸ್ತಾಪವಾದ ಮೂವರೂ ಸಹ ಅಖಿಲ ಭಾರತ ಸಮ್ಮೇಳನಕ್ಕೆ ಅರ್ಹರು. ಪ್ರಸ್ತುತ ಡಾ. ವಸುಂಧರಾ ಭೂಪತಿಯವರು ನಮ್ಮ ಬಳ್ಳಾರಿ ಜಿಲ್ಲೆಯವರೆನ್ನುವುದು ನಮ್ಮೀ ಸಂತಸವನ್ನು ಇಮ್ಮಡಿಗೊಳಿಸಿದೆ.  ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಅಂಕಣಗಾರ್ತಿಯಾಗಿ ಪ್ರಸಿದ್ಧಿ ಪಡೆದವರು. ಬಳ್ಳಾರಿ ಜಿಲ್ಲೆಯವರಾದ ಇವರು ಈಗಾಗಲೇ ೭೦ ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರು ರಚಿಸಿದ “ಶುರುವಾಗಲಿ ಕ್ರಾಂತಿ” ಕವಿತೆ ಮಂಗಳೂರು ವಿ.ವಿ.ಯಲ್ಲಿ ಪಠ್ಯವಾದರೆ, “ಆಹಾರ ಮತ್ತು ಮನಸ್ಸು” ಲೇಖನ ವಿಜಯಪುರದ ಅಕ್ಕಮಹಾದೇವಿ ವಿವಿಯಲ್ಲಿ ಪಠ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾವಾ ಪಠ್ಯಕ್ರಮದಲ್ಲಿ “ಮಹಿಳೆಯರ ಕಳ್ಳಸಾಗಾಣಿಕೆ” ಲೇಖನ ಅಳವಡಿಸಲಾಗಿದೆ. ಕರ್ನಾಟಕ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿ, ಕರ್ನಾಟಕ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೧೫ ರಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೨೦೧೮ ರಲ್ಲಿ ಬಹ್ರೆನ್‍ನಲ್ಲಿ ನಡೆದ ಪ್ರಥಮ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ೨೦೧೯ ರಲ್ಲಿ ಅಬುದಾಬಿಯಲ್ಲಿ ನಡೆದ ೧೫ ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದರು. ಇವರ ಸಾಹಿತ್ಯ, ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಯುನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ, ಶ್ರೇಷ್ಠ ಲೇಖಕಿ ಪುರಸ್ಕಾರ, ಅಕಲಂಕ ಪ್ರಶಸ್ತಿ, ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಡಾ. ಪಿ.ಎಸ್.ಶಂಕರ್ ವೈದ್ಯ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸೀತಾಸುತ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಸನ್ಮಾನಗಳು ದೊರೆತಿವೆ ಎಂದರು.
ಆಯ್ಕೆ ಸಂದರ್ಭದಲ್ಲಿ ರಾಜ್ಯ  ಎಚ್.ಎಸ್.ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ಬಳ್ಳಾರಿ ಜಿಲ್ಲಾಧ್ಯಕ್ಷ ಸತ್ಯಮೂರ್ತಿ, ಜಿಲ್ಲಾ ಉಪಾಧ್ಯಕ್ಷೆ ಡಾ. ಅಕ್ಕಮಹಾದೇವಿ, ತುಮಕೂರು ಜಿಲ್ಲಾಧ್ಯಕ್ಷ ಪ್ರಮೋದ್ ಜಿ.ಸಿ, ಕೊಪ್ಪಳ ಜಿಲ್ಲಾಧ್ಯಕ್ಷೆ ಅನಸೂಯ ಜಹಗೀರದಾರ, ಶಿವಮೊಗ್ಗ ಜಿಲ್ಲಾಧ್ಯಕ್ಷೆ ಕುಮುದ ಬಿ.ಸುಶೀಲಪ್ಪ, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಎನ್.ನಾಗರಾಜ್, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಪಿ.ರಾಮಚಂದ್ರ, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಜಿ.ಆರ್, ಹಗರಿಬೊಮ್ಮನಹಳ್ಳಿ ತಾಲ್ಲೂಕು ಅಧ್ಯಕ್ಷೆ ಜಯಮ್ಮ ಮತ್ತಿಹಳ್ಳಿ, ಜಿಲ್ಲಾ ಪದಾಧಿಕಾರಿಗಳಾದ ಟಿ.ಮಂಜುನಾಥಸ್ವಾಮಿ, ಎಸ್.ಪರಶುರಾಮಪ್ಪ, ತಾಂತ್ರಿಕ ವಿಭಾಗದ ರಾಜ್ಯ ಸಹಾಯಕರಾದ ನಿರಂಜನ್ ಎ.ಸಿ.ಬೇಲೂರು, ವಿ.ಶ್ರೀಧರ್, ಬಿ.ವೆಂಕಟೇಶ್, ಡಾ. ಕೃಷ್ಣವೇಣಿ ಆರ್.ಗೌಡ, ಸವಿತಾ ಕೃಷ್ಣರಾವ್, ಡಾ.ಗಿರಿಜಾ, ಕ್ಯಾದಿಗೆಹಾಳ್ ಉದೇದಪ್ಪ, ಮಾರೆಪ್ಪನಾಯಕ ಸೇರಿದಂತೆ ವಿವಿಧ ಜಿಲ್ಲೆಯ  ಜಿಲ್ಲಾಧ್ಯಕ್ಷರುಗಳು ಹಾಗೂ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button