Kannada NewsKarnataka NewsLatest

ಶ್ರೀರಾಮ ಮಂದಿರವು ರಾಷ್ಟ್ರಮಂದಿರದ ಪ್ರತೀಕವಾಗಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಐದು ಶತಮಾನಗಳ ಸಂಘರ್ಷದಲ್ಲಿ ವಿಜಯ ಸಾಧಿಸಿ, ಹಿಂದು ಧರ್ಮದ ದಿಗ್ವಿಜಯದ ಸಂಕೇತವಾಗಿರುವ ಅಯ್ಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರವು ನವಭಾರತ ಪುನುರುತ್ಥಾನದ ಮುನ್ನುಡಿ ಬರೆಯಲಿದೆ. ಆದ್ದರಿಂದ ಅದು ರಾಮಮಂದಿರವಷ್ಟೇ ಅಲ್ಲ ಸಮಸ್ತ ಭಾರತೀಯರ ರಾಷ್ಟ್ರಮಂದಿರವಾಗಿದೆ ಎಂದು ಆರ್ಷ ವಿದ್ಯಾಪೀಠದ ಚಿತ್‍ಪ್ರಕಾಶಾನಂದ ಸ್ವಾಮೀಜಿ ಹೇಳಿದರು.
ಶ್ಯಾಮ್‍ಪ್ರಸಾದ ಮುಖರ್ಜಿ ರಸ್ತೆಯ ಶಿವಂ ಪ್ಲಾಜಾದಲ್ಲಿ ಶುಕ್ರವಾರ ಜರುಗಿದ ಅಯ್ಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಅಭಿಯಾನದ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಅನೇಕ ಶತಮಾನಗಳ ಹಿಂದೆ ಕೆಲ ಮತಾಂಧರ ಆಡಳಿತದ ಅವಧಿಯಲ್ಲಿ ಸಮಸ್ತ ಹಿಂದು ಸಮಾಜ ಮತ್ತು ಸಂಸ್ಕøತಿಗೆ ಧಕ್ಕೆ ಉಂಟಾಗಿದೆ. ಆದರೆ ಆ ಎಲ್ಲ ಸಂಘರ್ಷದ ನಡುವೆಯು ಹಿಂದು ಸಮಾಜ ತನ್ನ ಅಸ್ತಿತ್ವ ಕಳೆದುಕೊಳ್ಳದೆ ಇರುವ ಸಂಗತಿಯು, ಹಿಂದು ಧರ್ಮದ ಬಲವನ್ನು ಸಮಸ್ತ ವಿಶ್ವಕ್ಕೆ ಸಾರುತ್ತದೆ ಎಂದು ಹೇಳಿದರು.
ಅಯ್ಯೋಧ್ಯೆಯಲ್ಲಿದ್ದ ವಿವಾದಿತ ಕಟ್ಟಡದ ಬದಲಾಗಿ ರಾಮಮಂದಿರ ನಿರ್ಮಾಣಕ್ಕೆ ಛತ್ರಪತಿ ಶಿವಾಜಿ ಸೇರಿದಂತೆ ಅನೇಕ ರಾಜ ಮಹಾರಾಜರು ಯುದ್ಧ ಮಾಡಿದ್ದಾರೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಕೂಡಾ ಎರಡು ಯುದ್ಧಗಳು ಜರುಗಿವೆ. ಲಕ್ಷಾಂತರ ರಾಮಭಕ್ತರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಸ್ವಾತಂತ್ರ್ಯದ ನಂತರ ಕಾನೂನು ಹೋರಾಟ ಜರುಗ ತೊಡಗಿತು. 1988ರಲ್ಲಿ ಜರುಗಿದ ಶ್ರೀರಾಮ ಕರಸೇವೆಗೆ ಮುಲಾಯಂಸಿಂಗ್ ಯಾದವ ಸರ್ಕಾರ ಸಾವಿರಾರು ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿ ಸರಯು ನದಿಯಲ್ಲಿ ರಕ್ತದ ಕೋಡಿಯನ್ನೆ ಹರಿಸಿದ್ದಾರೆ. ಸಾಧು ಸಂತರ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಕೈಗೊಂಡ ಅನೇಕ ಹೋರಾಟಗಳ ಫಲವಾಗಿ ಇಂದು ಆಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

ವಿಎಚ್‍ಪಿ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಜನೆವರಿ 15 ರಿಂದ ಫೆಬ್ರುವರಿ 5ರವರೆಗೆ ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಈ ನಿಮಿತ್ತ ಪೂರ್ವ ಸಿದ್ಧತೆ ರಾಷ್ಟ್ರಾದ್ಯಂತ ಭರದಿಂದ ಸಾಗಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಕೂಡಾ ಈಗಾಗಲೇ 500 ಕ್ಕೂ ಹೆಚ್ಚು ಬೈಠಕ್‍ಗಳು ಜರುಗಿವೆ. ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮುಂಬರುವ ಜನೇವರಿ 17ರಂದು ಬೆಳಗಾವಿ ನಗರದಲ್ಲಿ ನಿಧಿ ಸಂಗ್ರಹ ಅಭಿಯಾನ ಮಾಡಲಿದ್ದಾರೆ. ಬೆಳಗಾವಿಯ ಗ್ರಾಮಾಂತರ ಪ್ರದೇಶದಲ್ಲಿ ಜನೇವರಿ 24 ಮತ್ತು 31ರಂದು ಶ್ರೀರಾಮ ಮಂದಿರ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಜರುಗಲಿದೆ. ಬೆಳಗಾವಿ ನಗರದ ಪ್ರತಿ ಮನೆ ಮನೆಗೂ ತೆರಳಿ ಪ್ರತಿಯೊಬ್ಬರಿಂದಲೂ ನಿಧಿಯನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ನಾಗನಾಥ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ವಿಎಚ್‍ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ನಗರ ಅಧ್ಯಕ್ಷ ಡಾ.ಬಾಗೋಜಿ, ನಗರ ಕಾರ್ಯದರ್ಶಿ ಹೇಮಂತ ಹವಳ, ಜಿಲ್ಲಾ ಸಂಚಾಲಕ ಭಾವುಕಣ್ಣಾ ಲೋಹಾರ್ ಮತ್ತು ನಗರ ಸಂಯೋಜಕ ಆದಿನಾಥ ಗಾವಡೆ, ಕ್ರೀಡಾ ಭಾರತಿ ಪ್ರಾಂತ ಸಂಚಾಲಕ ಅಶೋಕ ಶಿಂತ್ರೆ ಸೇರಿದಂತೆ ವಿಎಚ್‍ಪಿಯ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.
ಬಸವರಾಜ ಹಳಿಂಗಳಿ ಪ್ರಾರ್ಥಿಸಿದರು. ವಿಭಾಗ ಸಹ ಪ್ರಮುಖ ಅಚ್ಯುತ್ ಕುಲಕರ್ಣಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button