ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ದು:ಖ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇದು ಆತ್ಮಹತ್ಯೆಯಲ್ಲ, ರಾಜಕಾರಣದ ಕೊಲೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರ ಆತ್ಮಹತ್ಯೆ ಘಟನೆ ಸಹಿಸಲು ಆಗುತ್ತಿಲ್ಲ. ನನ್ನ ಒಡಹುಟ್ಟಿದ ಸಹೋದರನಂತೆ ಇದ್ದರು. ನಾನಿಂದು ಅತ್ಯಾಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಪರಿಷತ್ ನಿಲ್ಲಿ ನಡೆದ ಗಲಾಟೆಯೇ ಅವರ ಆತ್ಮಹತ್ಯೆಗೆ ಕಾರಣ. ಆ ಘಟನೆಯಿಂದ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು. ಅವರ ಸಹೋದರ ಕೂಡ ಈ ಬಗ್ಗೆ ನನಗೆ ಹೇಳಿದಾಗ ಧರ್ಮೇಗೌಡರಿಗೆ ನಾನು ಹಾಗೂ ದೇವೇಗೌಡರು ಕರೆ ಮಾಡಿ ಧೈರ್ಯ ತುಂಬಿದ್ದೆವು. ಇದರಲ್ಲಿ ನಿಮ್ಮ ತಪ್ಪಿಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ಮಾನಸಿಕವಾಗಿ ಕುಗ್ಗಬಾರದು ಎಂದು ಹೇಳಿದ್ದೆವು. ಆದರೆ ಅವರಿಂದು ಆತ್ಮಹತ್ಯೆ ನಿರ್ಧಾರ ಮಾಡಿರುವುದು ಆಘಾತವನ್ನುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಧರ್ಮೇಗೌಡರ ತಂದೆ ನಾನಂತೂ ಮಂತ್ರಿಯಾಗಿಲ್ಲ, ನನ್ನ ಮಗನಾದರೂ ಮಂತ್ರಿಯಾಗುವುದನ್ನು ನೋಡಬೇಕು ಎಂದಿದ್ದರು. ಆದರೆ ಅವರ ಆಸೆ ಈಡೇರಿಸಲು ಸಾಧ್ಯವಾಗಿಲ್ಲ. ಅವರನ್ನು ಉಪಸಭಾಪತಿಯನ್ನಾಗಿ ಮಾಡಿದ್ದೇ ಇಂದು ನಾವು ಅವರನ್ನು ಕಳೆದುಕೊಳ್ಳಲು ಒಂದು ಕಾರಣವಾಯ್ತಾ ಎಂದೂ ಎನಿಸುತ್ತೆ. ಪರಿಷತ್ ಗಲಾಟೆ ಗಮನಿಸಿದಾಗ ನಮ್ಮಂತಹ ರಾಜಕಾರಣಿಗಳು ನಮ್ಮ ಸ್ವಾರ್ಥಕ್ಕಾಗಿ ಓರ್ವ ಪ್ರಾಮಾಣಿಕ ವ್ಯಕ್ತಿಯನ್ನು ಕೊಲೆ ಮಾಡಿದಂತೆನಿಸುತ್ತಿದೆ ಇದು ರಾಜಕಾರಣದ ಕೊಲೆ ಎಂದು ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ