Latest

ಯಕಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ; ಬಿಜೆಪಿಗೆ ತಿರುಗೇಟು ನೀಡಿದ ಹೆಚ್ ಡಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸದ್ಯ ಯಾವ ಪಕ್ಷಕ್ಕೆ ಯಾರ ಅಗತ್ಯವೂ ಇಲ್ಲ. ನಮಗಂತೂ ಬಿಜೆಪಿ ಸ್ನೇಹ ಬೇಕಿಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಕುಮಾರಸ್ವಾಮಿ, 1997ರಲ್ಲಿ ದೇವೇಗೌಡರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಇದೇ ಬಿಜೆಪಿಯ ಅಗ್ರಮಾನ್ಯ ಸಾರ್ವಕಾಲಿಕ ನಾಯಕ ದಿ. ವಾಜಪೇಯಿ ಅವರು ದೇವೇಗೌಡರಿಗೆ, ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿ ಬಂದವರು ನಾವು. ಇನ್ನು ಯಕಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ. ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟ ಸೇರುತ್ತದೆ, ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಾಡಲಾಗುತ್ತದೆ ಎಂಬುದೆಲ್ಲವೂ ಸುಳ್ಳಿನ ಕಂತೆ. ಈ ರೀತಿಯ ಆಮಿಷಗಳ ಮೂಲಕ ಬಿಜೆಪಿಯು ಜೆಡಿಎಸ್‌ ಕಾರ್ಯಕರ್ತರು, ಜೆಡಿಎಸ್‌ ಬೆಂಬಲಿಸುವ ಜನರ ಮನಸ್ಸುಗಳಿಗೆ ವಿಷ ಬಿತ್ತುವ ಕೆಲಸ ಮಾಡುತ್ತಿದೆ. ಇದು ನೈತಿಕವಲ್ಲದ ರಾಜಕಾರಣ ಎಂಬುದನ್ನು ಬಿಜೆಪಿ ತಿಳಿಯಲಿ ಎಂದು ಎಚ್ಚರಿಸಿದ್ದಾರೆ.

ಅಷ್ಟಕ್ಕೂ ಮೈತ್ರಿಗೆ ಜೆಡಿಎಸ್‌ನಿಂದ ಬಿಜೆಪಿಗೆ ಅರ್ಜಿ ಹಾಕಿದವರು ಯಾರು? ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲವೆಂದಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಮೈತ್ರಿ ಪ್ರಸ್ತಾಪ ಇಟ್ಟವರ್ಯಾರು? ನೆನಪಿರಲಿ, ಪ್ರಧಾನಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧವ್ಯವೂ ನನಗಿದೆ. ಯಡಿಯೂರಪ್ಪ ಹಿರಿಯರು ಎಂಬ ಗೌರವವೂ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ ಎಂದಿದ್ದಾರೆ.

ಜೆಡಿಎಸ್‌ ಅನ್ನು ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಅದಕ್ಕಾಗಿ ಈಗ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ. ಜೆಡಿಎಸ್‌ ಎನ್‌ಡಿಎ ಸೇರಲಿದೆ ಎಂಬುದು ಕಲ್ಪಿತ ಸುದ್ದಿ. ನಮಗೆ ಬೇಕಿರುವುದು ರಾಜ್ಯದ ಅಭಿವೃದ್ಧಿ ಹಾಗೂ ನಮ್ಮ ಕಾರ್ಯಕರ್ತರು. ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವಿದೆ ಎಂಬುದು ಸಾಬೀತಾಗಿದೆ. ಈಗ ನಮ್ಮ ಮುಂದಿರುವುದು ಪಕ್ಷದ ಸಂಘಟನೆ ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button